ಮೈಸೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಮುಂದಾಗಿದ್ದು, ಮೈಸೂರಿನಲ್ಲಿ ಶುಕ್ರವಾರ ಬೃಹತ್ ಸಮಾವೇಶ ನಡೆಸುತ್ತಿದೆ.
ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಚಿವ ಹೆಚ್ ಸಿ ಮಹದೇವಪ್ಪ ಅವರು, ಬಿಜೆಪಿ-ಜೆಡಿಎಸ್ ಇಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆ, ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿದೆ. ಅವರ ಈ ತಂತ್ರ ಬಯಲಾಗಲಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ವಿಫಲರಾಗಿದ್ದು, ಇದೀಗ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಉನ್ನತ ನಾಯಕರ ಒತ್ತಾಯದ ಮೇರೆಗೆ ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಾದಯಾತ್ರೆಯನ್ನು ರಾತ್ರೋರಾತ್ರಿ ನಿರ್ಧರಿಸಲಾಗಿಲ್ಲ, ದೆಹಲಿಯಲ್ಲಿ ಚರ್ಚಿಸಿದ್ದಾರೆ. ಒಬ್ಬ ವ್ಯಕ್ತಿ ಸಲ್ಲಿಸಿದ ದೂರಿನ ಮೇಲೆ ರಾಜ್ಯಪಾಲರು ವಿಚಾರಣೆ ನಡೆಸದೆ ನೋಟಿಸ್ ನೀಡಿರುವುದು ದುರದೃಷ್ಟಕರ ಸಂಗತಿ. ಇಲ್ಲದ ಸಮಸ್ಯೆಗಳ ಮುಂದಿಟ್ಟುಕೊಂಡು ಬಿಜೆಪಿ ಪಾದಯಾತ್ರೆ ನಡೆಸುತ್ತಿದೆ. ನಿಮ್ಮ ಈ ನಡೆಯ ವಿರುದ್ಧವೇ ನಾವು ಜನಾಂದೋಲನ ಸಮಾವೇಶ ಹಮ್ಮಿಕೊಂಡಿದ್ದೇವೆ. ಸಮಾವೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಸಹಕರಿಸಲಿಲ್ಲ. ವಾಲ್ಮೀಕ ನಿಗಮ, ಮುಡಾ ನಿವೇಶನ ಹಂಚಿಕೆ ಹಿಡಿದು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದರು. ಮುಡಾ ಹಗರಣದಲ್ಲಿ ಸಿಎಂ ಪಾತ್ರವಿಲ್ಲ. ನಿವೇಶನ ಹಂಚಿಕೆ ಕಾನೂನುಬದ್ಧವಾಗಿದೆ, ಸ್ವಜನಪಕ್ಷಪಾತ ಅಥವಾ ಅಧಿಕಾರ ದುರುಪಯೋಗದ ಬಗ್ಗೆ ಯಾವುದೇ ಪುರಾವೆ ಇಲ್ಲದಿರುವಾಗ ರಾಜ್ಯಪಾಲರ ಯಾವ ಕಾರಣಕ್ಕೆ ನೋಟಿಸ್ ನೀಡಿದರು ಎಂದು ಪ್ರಶ್ನಿಸಿದರು.
ಮುಡಾದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಶಾಸಕರಿದ್ದು, ಮಂಡಳಿಯ ನಿರ್ಧಾರದಂತೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ದಲಿತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬುದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಸಚಿವರಾದ ಕೆ ವೆಂಕಟೇಶ್, ಜಮೀರ್ ಅಹ್ಮದ್ ಮತ್ತು ಮಾಜಿ ಸಚಿವ ತನ್ವೀರ್ ಸೇಠ್ ಅವರು ಬಿಜೆಪಿಯ ಯೋಜನೆ ಫಲ ನೀಡುವುದಿಲ್ಲ ಎಂದರು.
Advertisement