
ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, 1971ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಮಾಡಿದಂತೆ ನಿರ್ಣಾಯಕ ಸೇನಾ ಕ್ರಮ ಕೈಗೊಳ್ಳಲು ಹಿಂಜರಿಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಬಾಂಗ್ಲಾದೇಶದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಬಲಪಂಥೀಯರಿಂದ ಆರ್ಥಿಕ ಹಾಗೂ ಸಾಮಾಜಿಕವಾಗಿ ನಿರಂತರ ದಾಳಿಗೆ ಒಳಗಾಗಿರುವ ಅಲ್ಪಸಂಖ್ಯಾತರ ಕಳವಳ ಪರಿಹರಿಸಲು ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆ ಮತ್ತು ಭಾರತದಲ್ಲಿ ಹಿಂದೂ ಅಲ್ಪಸಂಖ್ಯಾತರ ವಿರುದ್ಧ ವರದಿಯಾಗುತ್ತಿರುವ ದೌರ್ಜನ್ಯಗಳನ್ನು ಎತ್ತಿ ತೋರಿಸುವ ಇತ್ತೀಚಿನ ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಿಂದ ತೀವ್ರವಾಗಿ ನೊಂದಿರುವ ದೇಶದ ನಾಗರಿಕನಾಗಿ ಪತ್ರ ಬರೆಯುತ್ತಿರುವುದಾಗಿ ಅರ್ಷದ್ ಹೇಳಿದ್ದಾರೆ.
ಈ ವರದಿಗಳು ನಿಜವಾಗಿದ್ದರೆ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಗಮನಿಸಿದರೆ, ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತ ಸೂಕ್ತ ನಿಲುವು ತೆಗೆದುಕೊಳ್ಳಬೇಕಾಗಿದೆ.
ಬಾಂಗ್ಲಾದೇಶದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಯೋಗಕ್ಷೇಮವು ಪ್ರಮುಖ ಕಾಳಜಿಯಾಗಿರಬೇಕು. ಅವರ ಹಕ್ಕುಗಳು ಮತ್ತು ಘನತೆಯನ್ನು ರಕ್ಷಿಸಲು ತಕ್ಷಣದ ಮತ್ತು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹೊಸ ಬಾಂಗ್ಲಾದೇಶ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಬೇಕು ಎಂದಿದ್ದಾರೆ.
ಭಾರತದಲ್ಲಿ ಬಲಪಂಥೀಯ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಹ್ಯಾಂಡಲ್‌ಗಳು ಪ್ರಸಾರ ಮಾಡುತ್ತಿರುವ ಸುದ್ದಿಗಳು, ವಿಡಿಯೋಗಳು ನಿಜವೆಂದು ಸಾಬೀತಾದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Advertisement