ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ

'ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಕ್ಲೀನ್ ಎನ್ನುತ್ತಿದ್ದಾರೆ. ಅದೇನು ಕ್ಲೀನೋ ನನಗೂ ಗೊತ್ತಿಲ್ಲ. ಕಳೆದ ಬಾರಿ ಅವರು ಸಿಎಂ ಆಗಿದ್ದಾಗ 65 ಕೇಸುಗಳಿದ್ದವು. ಹ್ಯೂಬ್ಲೆಟ್ ವಾಚಿನಿಂದ ಹಿಡಿದು ಡಿನೋಟಿಫಿಕೇಶನ್ ರೀಡುವರೆಗೆ ಕೇಸುಗಳಿದ್ದವು. ಅವೆಲ್ಲವನ್ನೂ ಅವರು ಎಸಿಬಿ ಮೂಲಕ ಮುಚ್ಚಿ ಹಾಕಿದ್ದರು'
ಆರ್.ಅಶೋಕ್
ಆರ್.ಅಶೋಕ್
Updated on

ಬೆಂಗಳೂರು: ಮುಡಾ ಹಗರಣ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ನಾಳೆ ವಿಧಾನಸೌಧದ ಬಳಿ ಬಿಜೆಪಿ- ಜೆಡಿಎಸ್ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಈ ವಿಷಯ ತಿಳಿಸಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ನಾಳೆ ಬೆಳಗ್ಗೆ 11-30ಕ್ಕೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ಸರಕಾರ ಕಳೆದ 15 ತಿಂಗಳಿನಿಂದ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ನಡಿಗೆ ಭ್ರಷ್ಟಾಚಾರದ ಕಡೆಗೆ ಘೋಷಣೆಯನ್ನು ರಾಜ್ಯದ ಜನರು ಮಾತನಾಡಲು ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಕ್ಲೀನ್ ಎನ್ನುತ್ತಿದ್ದಾರೆ. ಅದೇನು ಕ್ಲೀನೋ ನನಗೂ ಗೊತ್ತಿಲ್ಲ. ಕಳೆದ ಬಾರಿ ಅವರು ಸಿಎಂ ಆಗಿದ್ದಾಗ 65 ಕೇಸುಗಳಿದ್ದವು. ಹ್ಯೂಬ್ಲೆಟ್ ವಾಚಿನಿಂದ ಹಿಡಿದು ಡಿನೋಟಿಫಿಕೇಶನ್ ರೀಡುವರೆಗೆ ಕೇಸುಗಳಿದ್ದವು. ಅವೆಲ್ಲವನ್ನೂ ಅವರು ಎಸಿಬಿ ಮೂಲಕ ಮುಚ್ಚಿ ಹಾಕಿದ್ದರು ಎಂದು ಟೀಕಿಸಿದರು.

ರಾಜ್ಯಪಾಲರು, 3 ಖಾಸಗಿ ದೂರುಗಳನ್ನು ಪರಿಶೀಲಿಸಿ, ಕಾನೂನು ತಜ್ಞರ ಜೊತೆ ಚರ್ಚಿಸಿ ಈಗ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿದ್ದಾರೆ. ಇದನ್ನು ಕಾಂಗ್ರೆಸ್ಸಿನವರು ಸ್ವಾಗತಿಸಬೇಕಿತ್ತು. ನಾನೇನೂ ತಪ್ಪು ಮಾಡಿಲ್ಲ; ತನಿಖೆಗೆ ತಯಾರಿರುವುದಾಗಿ ಸಿದ್ದರಾಮಯ್ಯನವರು ಹೇಳಬೇಕಿತ್ತು. ಆದರೆ, ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರ ಭ್ರಷ್ಟಾಚಾರವನ್ನು ಬೆಂಬಲಿಸಿದೆ. ಯಾವ ನೈತಿಕತೆ ಇಟ್ಟುಕೊಂಡು ಇವರು ಹೋರಾಟ ಮಾಡುತ್ತಾರೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ, ದೆಹಲಿ ಹೈಕಮಾಂಡ್ ಗೆ ಎಟಿಎಂ ಆಗಿದೆ. ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ, ಎಲ್.ಕೆ.ಅಡ್ವಾಣಿ ಮೇಲೆ ಆರೋಪ ಬಂದಾಗ ರಾಜೀನಾಮೆ ಪಡೆಯಲಾಗಿತ್ತು. ಆದರೆ ಈ ಪರಂಪರೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಅಜೆಂಡಾವೇ ಭ್ರಷ್ಟಾಚಾರ ಎಂದರು.

ಆರ್.ಅಶೋಕ್
ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ಖಂಡಿಸಿ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ: ಡಿಕೆಶಿ

ಈಗ ಕಾಂಗ್ರೆಸ್ ಪಕ್ಷದ ಸರ್ಕಾರವೇ ಇದೆ. ಆದ್ದರಿಂದ ಯಾವುದೇ ಪ್ರಕರಣದ ತನಿಖೆ ಬೇಕಾದರೂ ಮಾಡಲಿ. ಮುಡಾ ಹಗರಣದಲ್ಲಿ ನಾನು ಯಾವುದಕ್ಕೂ ಸಹಿ ಹಾಕಿಲ್ಲ, ದಾಖಲೆ ನೋಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅವರೇ 62 ಕೋಟಿ ರೂ. ಕೊಡಿ ಎಂದು ಹೇಳಿರುವಾಗ ಅದಕ್ಕಿಂತ ದೊಡ್ಡ ಸಾಕ್ಷಿ ಬೇಡ. ಸಿದ್ದರಾಮಯ್ಯ ಈಗ ಕಾನೂನಿಗೆ ತಲೆಬಾಗಬೇಕು ಎಂದು ಆಗ್ರಹಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಒಳಗೊಂದು ಹೊರಗೊಂದು ಎಂಬಂತೆ ಇದ್ದಾರೆ. ತಾವು ಸಿಎಂ ಆಗಬೇಕೆಂದೇ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕೆಂಬುದು ಅವರ ಪಕ್ಷಕ್ಕೆ ಬಿಟ್ಟ ನಿರ್ಧಾರ. ಮಲ್ಲಿಕಾರ್ಜುನ ಖರ್ಗೆಯವರು ಸುದೀರ್ಘ ರಾಜಕೀಯ ಹಿನ್ನೆಲೆ ಹಾಗೂ ಕಾನೂನು ಪ್ರಕಾರ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿರುವುದು ಸರಿ ಇದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com