ಜಂತಕಲ್ ಮೈನಿಂಗ್ ಪ್ರಕರಣ: ಸುಪ್ರೀಂ ಕೋರ್ಟ್ ಮುಂದೆ ಹೋಗಿ- ಸಿದ್ದರಾಮಯ್ಯಗೆ HDK ಸವಾಲು!

'ಯಾವುದೋ ಹಳೆಯ ಪ್ರಕರಣವನ್ನು ಕೆದಕಿ, ಸುಪ್ರೀಂ ಕೋರ್ಟ್ ನಲ್ಲಿರುವ ಪ್ರಕರಣ ಇಟ್ಟುಕೊಂಡು ರಾಜ್ಯಪಾಲರನ್ನು ಅಪಮಾನಿಸುವ, ನನ್ನನ್ನು ಬ್ಲಾಕ್ ಮೇಲ್ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆಲ್ಲಾ ಕೇರ್ ಮಾಡುವ ಪೈಕಿ ನಾನಲ್ಲ'
ಎಚ್. ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
ಎಚ್. ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಜಂತಕಲ್ ಮೈನಿಂಗ್ ಪ್ರಕರಣವನ್ನು ಹೈಕೋರ್ಟ್ ನಲ್ಲಿ ವಜಾ ಮಾಡಲಾಗಿದ್ದು, ಈ ಪ್ರಕರಣದಲ್ಲಿ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೇಕಾದರೆ ಸುಪ್ರೀಂ ಕೋರ್ಟ್ ಗೆ ಹೋಗಬಹುದು ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಯಾವುದೋ ಹಳೆಯ ಪ್ರಕರಣವನ್ನು ಕೆದಕಿ, ಸುಪ್ರೀಂ ಕೋರ್ಟ್ ನಲ್ಲಿರುವ ಪ್ರಕರಣ ಇಟ್ಟುಕೊಂಡು ರಾಜ್ಯಪಾಲರನ್ನು ಅಪಮಾನಿಸುವ, ನನ್ನನ್ನು ಬ್ಲಾಕ್ ಮೇಲ್ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆಲ್ಲಾ ಕೇರ್ ಮಾಡುವ ಪೈಕಿ ನಾನಲ್ಲ, ಈ ಸರ್ಕಾರಕ್ಕೂ ಅದು ಗೊತ್ತಿದೆ ಎಂದು ಕಿಡಿಕಾರಿದರು.

ರಾಜ್ಯಪಾಲರಿಗೆ ಸರ್ಕಾರದಿಂದ ಧಮ್ಕಿ: ಶನಿವಾರದಿಂದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಕುಮಾರಸ್ವಾಮಿ ಮೇಲೆ ಏಕೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿಲ್ಲಾ ಎಂದು ಕೇಳುತ್ತಿದ್ದಾರೆ. ಜಂತಕಲ್ ಮೈನಿಂಗ್ ಪ್ರಕರಣವನ್ನು ಹೈಕೋರ್ಟ್ ನಲ್ಲಿ ವಜಾ ಮಾಡಲಾಗಿದೆ. ಸಾಯಿ ವೆಂಕಟೇಶ್ವರ ಹಗರಣದ್ದು ತನಿಖೆ ಮಾಡಿ ಎಂದು ಹೇಳಿದ್ದಾರೆ. ಇವರು ಬೇಕಾದರೆ ಸುಪ್ರೀಂ ಕೋರ್ಟ್ ಗೆ ಹೋಗಬಹುದು. ಇವರಿಗೆ ಬೇಡ ಎಂದವರು ಯಾರು? ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಸಿದ್ದರಾಮಯ್ಯರಂತೆ ನಾನು ಸಚಿವರ ರಕ್ಷಣೆ ಪಡೆದಿಲ್ಲ; ಏಕಾಂಗಿಯಾಗಿ ಎದುರಿದ್ದೇನೆ: ರಾಜ್ಯಪಾಲರು ಮೂಡಾ ಹಗರಣ ವಿಚಾರಣೆಗೆ ಅನುಮತಿ ನೀಡಿದಾಕ್ಷಣ ಇಡೀ ಸಚಿವರು, ಶಾಸಕರನ್ನು ಇಟ್ಟುಕೊಂಡು ರಾಜ್ಯಪಾಲರಿಗೆ ಧಮ್ಕಿ ಹಾಕುವ, ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ನಾನು ಹೀಗೆಲ್ಲಾ ಮಾಡಿಲ್ಲ, ನನ್ನ ವಿರುದ್ಧ ಆರೋಪ ಕೇಳಿಬಂದಾಗ ಒಬ್ಬನೇ ಎದುರಿಸುತ್ತೇನೆ. ನನ್ನ ವಿರುದ್ಧ 2006ರಲ್ಲಿ ಗಣಿ ಆರೋಪ ಮಾಡಿದಾಗ ನಾನೊಬ್ಬನೇ ಎದುರಿಸಿದೆ. ಶಾಸಕರು, ಸಚಿವರನ್ನು ಅಡ್ಡ ಇಟ್ಟುಕೊಂಡು ರಕ್ಷಣೆ ಪಡೆಯುವ ಕೆಲಸ ಮಾಡಲಿಲ್ಲ. ಹೇಡಿತನ ಪ್ರದರ್ಶಿಸಲಿಲ್ಲ, ಧೈರ್ಯವಾಗಿ ಒಬ್ಬನೇ ಎದುರಿಸಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತರ ಕಾಂಗ್ರೆಸ್ ವರಸೆಯೇ ಬದಲಾಗಿದೆ. ಲೋಕಸಭೆಯಲ್ಲಿ ಪಕ್ಷದ ಸಂಸದರಿಗೆ ಕೈಗೆ ಸಂವಿಧಾನದ ಪ್ರತಿ ಕೊಟ್ಟು ಪ್ರಮಾಣ ಸ್ವೀಕಾರ ಮಾಡಿಸುವ ಕಾಂಗ್ರೆಸ್, ಕರ್ನಾಟಕದಲ್ಲಿ ಮಾತ್ರ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರ ವಿರುದ್ಧ ಅತ್ಯಂತ ಕೆಟ್ಟದಾಗಿ, ಅವಹೇಳನಕಾರಿಯಾಗಿ ಪ್ರತಿಭಟನೆ ಮಾಡಿಸುತ್ತಿದೆ. ಸಚಿವರು, ಶಾಸಕರು ರಾಜ್ಯಪಾಲರ ಬಗ್ಗೆ ಬಹಳ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಬೇರೆ ಯಾವ ರಾಜ್ಯದಲ್ಲಿ ಇಂಥ ಕೆಟ್ಟ ಪರಿಸ್ಥಿತಿಯನ್ನು ನಾನು ನೋಡಿಲ್ಲ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯಗೆ ಬಂಡೆಯಿಂದಲೇ ಡೇಂಜರ್: ಯಾರೋ ಒಬ್ಬರು ಸಿದ್ದರಾಮಯ್ಯನವರ ಜತೆ ಬಂಡೆಯಂತೆ ನಿಲ್ಲುವೆ ಎಂದು ಸೋಗು ಹಾಕುತ್ತಿದ್ದಾರೆ. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಡೇಂಜರ್. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಈ ಗತಿ ಬಂದಿದೆ. ವೈನಾಡು, ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗಿ ಭೂ ಕುಸಿತ ಉಂಟಾಯಿತಲ್ಲ, ಆ ಮಣ್ಣಿನ ಜತೆ ಬಂದು ಬಿದ್ದವಲ್ಲ ಬಂಡೆಗಳು, ಅವೇ ಜನರ ಜೀವ ಜೀವ ತೆಗೆದಿದ್ದು. ಸಿದ್ದರಾಮಯ್ಯ ಅವರಿಗೆ ಬಂಡೆಯಿಂದಲ್ಲೇ ಪತನ ಶುರುವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ದೇವೇಗೌಡರು, ಕುಮಾರಸ್ವಾಮಿ ಅವರು ಹಟ ಹಿಡಿದು ಮೋದಿ, ಅಮಿತ್ ಶಾ ಅವರ ಮೇಲೆ ಒತ್ತಡ ಹೇರಿ ರಾಜ್ಯಪಾಲರಿಂದ ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ಕೊಡಿಸಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಮಗೇನು ಬೇರೆ ಕೆಲಸ ಇಲ್ಲವೇ? ಅವರ ಪಕ್ಷದಲ್ಲಿನ ಪಿತೂರಿಗೆ ಸಿದ್ದರಾಮಯ್ಯ ಅವರು ಬಲಿಯಾಗುತ್ತಿದ್ದಾರೆ ಎಂದರು.

ಕಾಡುಗೊಲ್ಲರ ಬಗ್ಗೆ ಚರ್ಚೆ ಮಾಡಲು ದೇವೇಗೌಡರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಹೋಗಿದ್ದರು. ನಾನೂ ಹೋಗಿದ್ದೆ. ಇದಕ್ಕೆ ರಾಜಕೀಯ ಬಣ್ಣ ಬಳಿಯುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ನಮ್ಮ ಮೇಲೆ ಮೇಲೆ ಕಾಂಗ್ರೆಸ್ ನವರು ವಿನಾಕಾರಣ ಕೆಂಡ ಕಾರುತ್ತಿದ್ದಾರೆ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಕೇಳಿಲ್ಲ. ಅವರು ರಾಜೀನಾಮೆ ಕೊಡುವುದೂ ಇಲ್ಲ. ಅದು ನನಗೆ ಗೊತ್ತಿದೆ. ಕಾನೂನು ಅಂತ ಒಂದಿದೆ. ಯಾವ ಹಂತದಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com