ಬೆಂಗಳೂರು: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ-ಜೆಡಿಎಸ್ ಸೋಮವಾರ ಪ್ರತಿಭಟನೆ ನಡೆಸಿದವು. 'ಭ್ರಷ್ಟ ಕಾಂಗ್ರೆಸ್ ತೊಲಗಲಿ ಮೈಸೂರು ಮುಡಾ ಉಳಿಯಲಿ' ದಲಿತರ ಭೂಮಿ ನುಂಗಿದ ಸಿದ್ದರಾಮಯ್ಯ ರಾಜೀನಾಮೆ ಯಾವಾಗ ಎಂಬಿತ್ಯಾದಿ ಭಿತ್ತಿಪತ್ರ ಹಿಡಿದು, ಘೋಷಣೆ ಕೂಗುವುದರೊಂದಿಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿದ್ದರಾಮಯ್ಯರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ಅವರು ಕೂಡಲೇ ರಾಜೀನಾಮೆ ನೀಡಿ, ಮನೆಗೆ ಹೋಗಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟ ತಾರ್ಕಿಕ ಘಟ್ಟ ತಲುಪಿದೆ. ಮುಡಾ ಹಗರಣದಲ್ಲಿ ಸಾವಿರಾರು ಕೋಟಿ ರೂ.ಮೌಲ್ಯದ ನಿವೇಶನ ಕಬಳಿಸಲಾಗಿದ್ದು, ನಾವು ಸಿದ್ದರಾಮಯ್ಯರ ರಾಜೀನಾಮೆಗೆ ಒತ್ತಾಯಿಸುತ್ತಿರುವುದಾಗಿ ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬದಲು ಸಿದ್ದರಾಮಯ್ಯ ಗೂಂಡಾಗಿರಿ ನಡೆಸಿದ್ದಾರೆ. ಅವರು ರಾಜ್ಯಪಾಲರ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕು. ಕಾಂಗ್ರೆಸ್ ಸರ್ಕಾರ ಭ್ರಷ್ಟರಿಂದ, ಭ್ರಷ್ಟರಿಗೆ ಮತ್ತು ಭ್ರಷ್ಟರ ಪರವಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು.
ಪಕ್ಷದ ಹೈಕಮಾಂಡ್ ತಮ್ಮನ್ನು ರಕ್ಷಿಸುತ್ತದೆ, ಸಚಿವರು, ಶಾಸಕರು ತಮ್ಮ ಬೆಂಬಲಕ್ಕಿದ್ದಾರೆ ಎಂಬ ಭ್ರಮೆಯಿಂದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೊರಬರಬೇಕು. ನಿಮ್ಮ ಅಹಂಕಾರ ಸ್ವೀಕಾರಾರ್ಹವಲ್ಲ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ, ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕಾನೂನು ಕ್ರಮ ಎದುರಿಸಿ ಎಂದು ಅವರು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಮುಡಾ ಪ್ರಕರಣದಲ್ಲಿ ಸಾವಿರಾರು ಕೋಟಿ ರೂ. ಕಬಳಿಸಿದ್ದರೆ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ರೂ.187 ಕೋಟಿ ಹಗರಣವಾಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಜನರು ಬಯಸಿದ್ದಾರೆ. ಕೂಡಲೇ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಕಾಂಗ್ರೆಸ್ ಪ್ರತಿಭಟನೆಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಾಂವಿಧಾನಿಕ ಹುದ್ದೆ ಹೊಂದಿರುವ ರಾಜ್ಯಪಾಲರಿಗೆ ಅಗೌರವ ತೋರುವುದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ಸಿದ್ದರಾಮಯ್ಯ ದಲಿತ ಸಮುದಾಯವನ್ನು ನಾಶ ಮಾಡುತ್ತಿದ್ದಾರೆ. ನಿಮ್ಮನ್ನು ನಂಬಿದವರ ಚರ್ಮ ಸುಲಿದು ಚಪ್ಪಲ್ಲಿ ಮಾಡಿಕೊಂಡಿದ್ದೀರಿ ಎಂದು ಆರೋಪಿಸಿದರು.
ರಾಜ್ಯಪಾಲರು ತನ್ನ ವಿವೇಚನೆಯಿಂದ ವಿಚಾರಣೆ ನಡೆಸುವ ಹಕ್ಕು ಹೊಂದಿದ್ದು, ಅವರ ನೋಟಿಸ್ ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿಲ್ಲ. ರಾಜ್ಯಪಾಲರು ಕಾನೂನುಬದ್ಧವಾಗಿ ವರ್ತಿಸಿದ್ದಾರೆ. ಸಿದ್ದರಾಮಯ್ಯ ನಿಜವಾಗಿಯೂ ಆಧುನಿಕ ಕಾಲದ ‘ಸತ್ಯ ಹರಿಶ್ಚಂದ್ರ’ ಆಗಲು ಬಯಸಿದರೆ ಅವರು ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು,” ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.
ಶಾಸಕರಾದ ಆರಗ ಜ್ಞಾನೇಂದ್ರ, ಸಿಟಿ ರವಿ, ಅರವಿಂದ್ ಬೆಲ್ಲದ್, ಜೆಡಿಎಸ್ ನಾಯಕ ಕೃಷ್ಣ ರೆಡ್ಡಿ ಮತ್ತಿತರರು ಮಾತನಾಡಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಎನ್ ಡಿಎ ಹೋರಾಟ ಮುಂದುವರೆಸಲಿದೆ ಎಂದು ತಿಳಿಸಿದರು.
Advertisement