
ಹೊಸದುರ್ಗ: ಹೊಸದುರ್ಗ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಎರಡನೇ ಅವಧಿಗೆ ಪಕ್ಷ ಅಧಿಕಾರದ ಗದ್ದುಗೆ ಏರಿತು. ಅಧ್ಯಕ್ಷರಾಗಿ ರಾಜೇಶ್ವರಿ ಆನಂದ್, ಉಪಾಧ್ಯಕ್ಷರಾಗಿ ಗೀತಾ ಗಜೇಂದ್ರ ಅವಿರೋಧವಾಗಿ ಆಯ್ಕೆಯಾದರು.
ಗುರುವಾರ ಪುರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ರಾಜೇಶ್ವರಿ ಆನಂದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಗಜೇಂದ್ರ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರಿಬ್ಬರು ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ತಿರುಪತಿ ಪಾಟೀಲ್ ಘೋಷಿಸಿದರು.
23 ಸದಸ್ಯರ ಬಲ ಹೊಂದಿರುವ ಹೊಸದುರ್ಗ ಪಟ್ಟಣದ ಪುರಸಭೆಯಲ್ಲಿ ಬಿಜೆಪಿ ಸದಸ್ಯರು 14, ಪಕ್ಷೇತರರು 5, ಕಾಂಗ್ರೆಸ್ 4 ಸದಸ್ಯರ ಬಲ ಹೊಂದಿದೆ. 14 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಎರಡನೇ ಅವಧಿಗೆ ಅಧಿಕಾರ ಹಿಡಿಯಿತು.
ಪುರಸಭೆ ಮುಂಭಾಗದಲ್ಲಿ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಗೋವಿಂದ ಕಾರಜೋಳ ಅಭಿನಂದಿಸಿದರು.
Advertisement