ಮಂಗಳೂರು: ಬಂಟ್ವಾಳ ಪುರಸಭೆಯಲ್ಲಿ ಎಸ್ ಡಿಪಿಐ ಜೊತೆಗಿನ ಮೈತ್ರಿಯೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ. ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ. ವಾಸು ಪೂಜಾರಿ ಅಧ್ಯಕ್ಷರಾಗಿ ಮತ್ತು ಎಸ್ ಡಿಪಿಐನ ಮೂನಿಶ್ ಅಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
27 ಸದಸ್ಯರ ಪುರಸಭೆಯಲ್ಲಿ ಕಾಂಗ್ರೆಸ್ ಟಿಕೆಟ್ ನಲ್ಲಿ ಗೆಲುವು ಸಾಧಿಸಿದ್ದ ಗಂಗಾಧರ್ ರಾಜೀನಾಮೆ ನೀಡಿದ್ದ ನಂತರ ಕಾಂಗ್ರೆಸ್ ಒಟ್ಟು ಸದಸ್ಯರ ಸಂಖ್ಯೆ 11ಕ್ಕೆ ಕಡಿಮೆಯಾಗಿತ್ತು. ಬಿಜೆಪಿ 11 ಮತ್ತು ಎಸ್ ಡಿಪಿಐ ನಾಲ್ವರು ಸದಸ್ಯರನ್ನು ಹೊಂದಿದೆ.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಸೇರಿದಂತೆ ಬಿಜೆಪಿ ಚುನಾವಣೆಯಲ್ಲಿ 13 ಮತಗಳನ್ನು ಹೊಂದಿತ್ತು.
ಕಾಂಗ್ರೆಸ್ ನ ವಾಸು ಪೂಜಾರಿ ಮುನ್ನಡೆ ಪಡೆದ ನಂತರ ಅಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದ ಎಸ್ ಪಿಡಿಪಿಐನ ಇದ್ರಿಶ್, ತಮ್ಮ ನಾಮಪತ್ರವನ್ನು ಹಿಂಪಡೆದರು. ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕಾಗಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಪರಿಣಾಮ ಕಾಂಗ್ರೆಸ್- ಎಸ್ ಡಿಪಿಐ, ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ 15 ಮತಗಳನ್ನು ಗಳಿಸಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಎ.ಗೋವಿಂದ ಪ್ರಭು ಮತ್ತು ಹರಿಪ್ರಸಾದ್ ತಲಾ 13 ಮತಗಳನ್ನು ಪಡೆದರು.
ಅಧಿಕಾರಕ್ಕಾಗಿ ಎಸ್ ಡಿಪಿಐ ಜೊತೆಗಿನ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಸಂಸದ ಬ್ರಿಜೇಶ್ ಚೌಟ ವಾಗ್ದಾಳಿ ನಡೆಸಿದ್ದಾರೆ. ಬಹಿರಂಗವಾಗಿಯೇ ಎಸ್ ಡಿಪಿಐ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಬಂಟ್ವಾಳ ಜನತೆಗೆ ಮೋಸ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
Advertisement