ಹಾಸನ: ನಗರದಲ್ಲಿ ಮತ್ತೆ ಜೆಡಿಎಸ್-ಬಿಜೆಪಿ ಸಂಘರ್ಷ ಮುಂದುವರಿದಿದೆ. ಹಾಸನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಬೆಂಬಲಿಗರ ಮಧ್ಯೆ ಜಿದ್ದಾಜಿದ್ದಿ ನಡೆದಿದೆ. ಅಂತಿಮವಾಗಿ ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಬೆಂಬಲಿಗರು ಮೇಲುಗೈ ಸಾಧಿಸಿದ್ದು, ಹಾಸನ ನಗರಸಭೆ ಜೆಡಿಎಸ್ ಪಾಲಾಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನದ ಚುನಾವಣೆ ಮುಕ್ತಾಯವಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿ ಅಧಿಕೃತ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ. ಆದರೆ, ಬಿಜೆಪಿಯಿಂದಲೇ ಆಯ್ಕೆಯಾಗಿ ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿದ್ದ ಲತಾದೇವಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಶಾಸಕ ಸ್ವರೂಪ್ ಪ್ರಕಾಶ್ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ.
ಬುಧವಾರ ನಡೆದ ಚುನಾವಣೆಯಲ್ಲಿ ನಗರಸಭೆ ನೂತನ ಅಧ್ಯಕ್ಷರಾಗಿ 9 ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಎಂ.ಚಂದ್ರೇಗೌಡ, ಉಪಾಧ್ಯಕ್ಷೆಯಾಗಿ 35 ನೇ ವಾರ್ಡ್‌ನ ಲತಾದೇವಿ ಸುರೇಶ್ ಆಯ್ಕೆಯಾಗಿದ್ದಾರೆ.
ಮೈತ್ರಿಯಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿ, ಶಿಲ್ಪಾವಿಕ್ರಮ್‌ರನ್ನು ಕಣಕ್ಕೆ ಇಳಿಸಿತ್ತು. ಆದರೆ, ವಿಪ್ ಜಾರಿ ಹಿನ್ನೆಲೆಯಲ್ಲಿ ಶಿಲ್ಪಾವಿಕ್ರಂಗೆ ಕೈ ಎತ್ತುವ ಮೂಲಕ ತಮ್ಮ ವಿರುದ್ಧವೇ ಲತಾದೇವಿ ಮತ ಹಾಕಿದ್ದರು. ಆದರೆ, ಲತಾದೇವಿಗೆ ಜೆಡಿಎಸ್‌ನವರು ಹೆಚ್ಚು ವೋಟ್ ಹಾಕಿ ಗೆಲ್ಲಿಸಿಕೊಂಡಿದ್ದಾರೆ.
ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಶಾಸಕ ಸ್ವರೂಪ್ ಪ್ರಕಾಶ್ ಸೇರಿ ಒಟ್ಟು 36 ಮತಗಳಿದ್ದವು. ಜೆಡಿಎಸ್‌ನ ಎಂ. ಚಂದ್ರೇಗೌಡರಿಗೆ 34 ಮತಗಳು ಬಂದಿದ್ದು, ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲತಾ ದೇವಿ ಅವರಿಗೆ 21 ಮತಗಳು ಬಂದಿದ್ದು, ಬಿಜೆಪಿ ಅಧಿಕೃತ ಅಭ್ಯರ್ಥಿ ಶಿಲ್ಪಾ ವಿಕ್ರಂ ಅವರಿಗೆ 14 ಮತಗಳು ದೊರೆತವು.
ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಎರಡೂ ಪಕ್ಷಗಳ ಮಧ್ಯೆ ತಲಾ 10 ತಿಂಗಳು ಅಧಿಕಾರ ಹಂಚಿಕೆ ಆಗಬೇಕು. 10 ತಿಂಗಳು ಜೆಡಿಎಸ್ ಹಾಗೂ ಉಳಿದ ಹತ್ತು ತಿಂಗಳು ಬಿಜೆಪಿಗೆ ಅವಕಾಶ ಸಿಗಬೇಕು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ದಾಳ ಉರುಳಿಸಿದ್ದರು. ಆದರೆ ಪ್ರತಿದಾಳ ಉರುಳಿಸಿದ ಜೆಡಿಎಸ್ ಮುಖಂಡರು ಅಧ್ಯಕ್ಷ ಸ್ಥಾನ ಉಳಿಸಿಕೊಂಡಿದ್ದಲ್ಲದೇ ತಮ್ಮನ್ನು ಬೆಂಬಲಿಸುತ್ತಿರುವ ಬಿಜೆಪಿ ಸದಸ್ಯೆಯನ್ನೇ ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡುವ ಮೂಲಕ ಪ್ರೀತಂ ಗೌಡ ಹಾಗೂ ಬಿಜೆಪಿ ಮುಖಂಡರಿಗೆ ಪ್ರತ್ಯುತ್ತರ ನೀಡಿದ್ದಾರೆ. ವಿಪ್ ಜಾರಿ ಅಸ್ತ್ರದ ಮೂಲಕ ಶಿಲ್ಪಾ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಬಿಜೆಪಿ ತಂತ್ರವೂ ವಿಫಲವಾಗಿದೆ.
Advertisement