ಬೆಂಗಳೂರು: ಮುಡಾ ಹಗರಣದಲ್ಲಿ ವೈಟ್ನರ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು, 'ನೀವು ಕೋರ್ಟ್‌ಗೆ ಏಕೆ ಕೊಟ್ಟಿಲ್ಲ!? ನ್ಯಾಯಾಲಯವನ್ನೂ ದಾರಿ ತಪ್ಪಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದನ್ನು ಸ್ಪಷ್ಟವಾಗಿ ನೋಡಿ ಎಂದು ಸಿದ್ದರಾಮಯ್ಯ ಸುದೀಘ ಟ್ವೀಟ್ ಮಾಡಿದ ಬೆನ್ನಲ್ಲೇ ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಎಚ್ ಚ್ ಡಿ ಕುಮಾರಸ್ವಾಮಿ, 'ಮಾನ್ಯ ಸಿದ್ದರಾಮಯ್ಯನವರೇ..
ವೈಟ್ನರ್ ಅಡಿಯಲ್ಲಿ ಅಡಗಿಸಿಟ್ಟಿದ್ದ ಅಕ್ಷರಗಳಿಗೆ ಟಾರ್ಚ್ ಹಾಕಿ ತಡಕಾಡುತ್ತಿರುವುದು ಈ ರಾಜ್ಯದ ಘನತೆವೆತ್ತ ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ. ಇದು ಮೂಲ ದಾಖಲೆ, ಮೂಡಾದಲ್ಲಿದೆ. ನಿಮ್ಮ ಬಳಿಗೆ ಹೇಗೆ ಬಂತು? ನಿಮಗೆ ಈ ಮೂಲ ದಾಖಲೆ ತಂದು ಕೊಟ್ಟ ಮಹಾಶಯರು ಯಾರು? ಇಷ್ಟಕ್ಕೂ ಈ ಮೂಲ ದಾಖಲೆ ಮೂಡಾದಲ್ಲಿದೆಯಾ? ಅಥವಾ ನಿಮ್ಮ ಮನೆಯಲ್ಲಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಅಂತೆಯೇ, 'ಈ ಮೂಲ ದಾಖಲೆಗೆ ಟಾರ್ಚ್ ಹಾಕಿದವರು ಯಾರು? ನೀವಾ..? ಅಥವಾ ಇನ್ನಾರಾದರೂ ಇದ್ದಾರಾ? ಎಂದು ಹೇಳಿದ್ದಾರೆ.
ಅಲ್ಲದೆ, 'ನನ್ನ ಪ್ರಶ್ನೆ; ಈ ದಾಖಲೆಯನ್ನೇಕೆ ನೀವು ಕೋರ್ಟ್‌ಗೆ ಕೊಟ್ಟಿಲ್ಲ!? ನ್ಯಾಯಾಲಯವನ್ನೂ ದಾರಿ ತಪ್ಪಿಸುತ್ತಿದ್ದೀರಿ. ಜನರನ್ನು ದಿಕ್ಕು ತಪ್ಪಿಸಿದ ಹಾಗೇ ನ್ಯಾಯಾಲಯಕ್ಕೂ ಸುಳ್ಳು ಮಾಹಿತಿ ಕೊಟ್ಟು ಅಲ್ಲಿಯೂ ಟಾರ್ಚ್ ಬಿಟ್ಟು ತೋರಿಸುತ್ತೀರಾ.., ಹೇಗೆ? ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದೀರಿ.. ಶಿಶುಪಾಲನ ಹಾಗೆ.. ಮಾಡಿದ ತಪ್ಪು ಮುಚ್ಚಿಕೊಳ್ಳಲು ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದೀರಿ ಎಂದು ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
Advertisement