
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ನಡೆಸುತ್ತಿರುವ ಟ್ರಸ್ಟ್‌ಗೆ ಭೂಮಿ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಬುಧವಾರ ಕಾಂಗ್ರೆಸ್ ವಿರುದ್ಧ ಹೊಸ ವಾಗ್ದಾಳಿ ನಡೆಸಿದೆ.
ಇಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರು, ಕರ್ನಾಟದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ಸರ್ಕಾರ ಖರ್ಗೆ ಅವರ ಕುಟುಂಬಕ್ಕೆ ಬೆಂಗಳೂರಿನಲ್ಲಿ ಭೂಮಿಯನ್ನು ಹರಾಜು ಮಾಡದೆ ಮಂಜೂರು ಮಾಡಿದೆ. ಆದರೆ ಫೆಬ್ರವರಿ 14 ರಂದು, ಕರ್ನಾಟಕ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಇಲಾಖೆಯು ಸಮಾಜ ಕಲ್ಯಾಣಕ್ಕಾಗಿ ತುಂಡು ಭೂಮಿಯನ್ನು ಕೇಳಿತ್ತು. ಅದಕ್ಕೆ ಮಂಜೂರು ಮಾಡಲಾಗಿಲ್ಲ. ಅದರಂತೆ 72 ಇತರ ಅರ್ಜಿದಾರರು ಸರದಿ ಸಾಲಿನಲ್ಲಿದ್ದರೂ ಖರ್ಗೆ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಭೂಮಿ ಹಂಚಿಕೆಗೆ ಇ-ಹರಾಜು ಏಕೆ ಮಾಡಲಿಲ್ಲ? ಎಂದು ನಾನು ಕರ್ನಾಟಕ ಸರ್ಕಾರವನ್ನು ಕೇಳಲು ಬಯಸುತ್ತೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರದ ಒಂದೊಂದೇ ಪ್ರಕರಣಗಳು ಹೊರ ಬರುತ್ತಿವೆ ಎಂದು ಬಿಜೆಪಿ ನಾಯಕ ವಾಗ್ದಾಳಿ ನಡೆಸಿದರು.
ಬಿಜೆಪಿ ಚುಕ್ಕಾಣಿ ಹಿಡಿದಾಗ ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್‌ನ ಕೆಲವೇ ನಾಯಕರ ಅಭಿವೃದ್ಧಿಯಾಗುತ್ತಿದೆ ಎಂದು ಟೀಕಿಸಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಭೂಮಿಯನ್ನು ಖರ್ಗೆ ಅವರ ಕುಟುಂಬದವರು ನಡೆಸುತ್ತಿರುವ ಟ್ರಸ್ಟ್‌ಗೆ ಹಂಚಿಕೆ ಮಾಡಿರುವುದನ್ನು ರಾಜ್ಯಸಭಾ ಸದಸ್ಯರೂ ಆಗಿರುವ ಬಿಜೆಪಿ ನಾಯಕ ಲೆಹರ್ ಸಿಂಗ್ ಸಿರೋಯಾ ಅವರು ಭಾನುವಾರ ಪ್ರಶ್ನಿಸಿದ್ದರು ಮತ್ತು ಅವರು ಭೂಮಿ ಪಡೆಯಲು ಯಾವಾಗ ಏರೋಸ್ಪೇಸ್ ಉದ್ಯಮಿಗಳಾದರು ಎಂದು ಕೇಳಿದ್ದರು.
ಸಿರೋಯಾ ಆರೋಪಗಳನ್ನು ತಳ್ಳಿಹಾಕಿದರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು, ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ನಡೆಸುತ್ತಿರುವ ಶೈಕ್ಷಣಿಕ ಟ್ರಸ್ಟ್‌ಗೆ ನಿಯಮಾನುಸಾರ ನಿಗದಿತ ಬೆಲೆಯಲ್ಲಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಿಎ ಪ್ಲಾಟ್ ಮಂಜೂರು ಮಾಡಲಾಗಿದೆ. ಪ್ರಕ್ರಿಯೆಯಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದರು.
Advertisement