
ಬೆಂಗಳೂರು: ಡಿ.5ರಂದು ಹಾಸನದಲ್ಲಿ ಹಮ್ಮಿಕೊಂಡಿರುವ ಸ್ವಾಭಿಮಾನಿ ಸಮಾವೇಶ ಪಕ್ಷದ ಕಾರ್ಯಕ್ರಮವಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಪಕ್ಷವನ್ನು ಬಲಪಡಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಮಾವೇಶದ ಪೂರ್ವಭಾವಿಯಾಗಿ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಮೈಸೂರು ಭಾಗದ ಮುಖಂಡರ ಸಭೆ ಭಾನುವಾರ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ರ‍್ಯಾಲಿ ಬಳಿಕ ಬೆಳಗಾವಿಯಲ್ಲೂ ಇದೇ ರೀತಿಯ ರ್ಯಾಲಿಯನ್ನು ಶೀಘ್ರದಲ್ಲೇ ನಡೆಸಲಾಗುವುದು. ನಂತರ ಎಲ್ಲಾ ಜಿಲ್ಲೆಗಳಲ್ಲೂ ರ‍್ಯಾಲಿ ನಡೆಯಲಿದೆ ಎಂದು ಹೇಳಿದರು.
ಹಾಸನದಲ್ಲಿ ನಡೆಯುವ ರ‍್ಯಾಲಿಯು ಜನರ ಕಲ್ಯಾಣ, ಸಂವಿಧಾನ ರಕ್ಷಣೆ, ಸ್ವಾಭಿಮಾನ ರಕ್ಷಣೆ, ಸರ್ಕಾರದ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದೆ. ಸರ್ಕಾರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ಜನ ಈಗಾಗಲೇ ತೀರ್ಪು ಕೊಟ್ಟಿದ್ದಾರೆ. ಎಐಸಿಸಿ ನಾಯಕರ ನಿರ್ದೇಶನದಂತೆ ಮುಂದಿನ ಎರಡು ತಿಂಗಳು ಎಲ್ಲ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಜಿಪಂ/ ತಾಪಂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ರ‍್ಯಾಲಿ ನಡೆಸಲಾಗುತ್ತಿದೆ. ''ಯಾವುದೋ ಉದ್ದೇಶ ಇಟ್ಟುಕೊಂಡು ವೇದಿಕೆ ಸಿದ್ಧಪಡಿಸಬೇಕಲ್ಲವೇ?, ಸದ್ಯದಲ್ಲೇ ಚುನಾವಣೆ ನಡೆಯುತ್ತಿರುವುದು ನಿಜ.. ತಡೆಯಲು ಸಾಧ್ಯವಿಲ್ಲ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಫೆಬ್ರವರಿ ವೇಳೆಗೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕೆಲವು ಸಚಿವರು ಈ ಸಮಾವೇಶಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಸಮಾವೇಶದ ಸ್ವರೂಪ ಬದಲಾಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿ, ‘ಸಮಾವೇಶದ ಸ್ವರೂಪ ಎಲ್ಲಿ ನಿರ್ಧಾರ ಆಗಿತ್ತು? ಪಕ್ಷದ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯೇ ಹೊರತು ಮೈತ್ರಿ ಪಕ್ಷದ ಮುಖ್ಯಮಂತ್ರಿ ಅಲ್ಲ. ಇಲ್ಲಿ ಒಂದೇ ಪಕ್ಷ, ಒಂದೇ ಚಿಹ್ನೆ. ಕೆಲವರ ವೈಯಕ್ತಿಕ ಅಭಿಪ್ರಾಯವೇ ಬೇರೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೇರಿ ಚರ್ಚೆ ಮಾಡಿದ್ದೇವೆ’ ಎಂದರು.
ಸಮಾವೇಶಕ್ಕೆ ಹಲವು ಸಂಘಟನೆಗಳು, ಸಮುದಾಯಗಳು ಬೆಂಬಲ ವ್ಯಕ್ತಪಡಿಸಿದ್ದು, ನಾವು ಇದನ್ನು ಮನಃಪೂರ್ವಕವಾಗಿ ಸ್ವೀಕರಿಸುತ್ತೇವೆ ಎಂದು ಹೇಳಿದರು.
ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ ಇಲ್ಲ. ಅದರ ಅಗತ್ಯವೂ ಇಲ್ಲ, ಶೀಘ್ರದಲ್ಲೇ ವಿಧಾನಮಂಡಲದ ಅಧಿವೇಶನವಿದೆ, ಕೇವಲ ಒಂದು ಸಚಿವ ಸ್ಥಾನ ಮಾತ್ರ ಖಾಲಿಯಾಗಿದೆ. ಅದರ ಬಗ್ಗೆ ಸಿಎಂ ಮಾತನಾಡಿದ್ದಾರೆಂದು ಹೇಳಿದರು.
ನಾನು ಯಾವುದೇ ಸಚಿವರ ಪ್ರಗತಿ ಬಗ್ಗೆ ವರದಿ ಕಳುಹಿಸುವುದಿಲ್ಲ, ನಮ್ಮ ಹೈಕಮಾಂಡ್ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದ್ದು, ಎಲ್ಲರಿಂದ ಮಾಹಿತಿ ಪಡೆಯುತ್ತಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಕಾಂಗ್ರೆಸ್ ವತಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
Advertisement