BJP ಶಿಸ್ತು ಸಮಿತಿ ನೋಟಿಸ್: ಯತ್ನಾಳ್ ಗೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಬೆಂಬಲ, ಸಮರ್ಥನೆ

ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಆಗುತ್ತಿಲ್ಲ. ಅಧ್ಯಕ್ಷ ಸ್ಥಾನದಿಂದ ತಕ್ಷಣವೇ ಅವರನ್ನು ಬದಲಾವಣೆ ಮಾಡಬೇಕು. ಯಡಿಯೂರಪ್ಪ ಹುಟ್ಟು ಹೋರಾಟಗಾರ. ಆದರೆ ವಿಜಯೇಂದ್ರ ಯಡಿಯೂರಪ್ಪ ಅವರ ಕಾಲಿನ ಧೂಳಿಗೂ ಸಮನಲ್ಲ.
ಬಸನಗೌಡ ಪಾಟೀಲ್ ಯತ್ನಾಳ್-ರಮೇಶ್ ಜಾರಕಿಹೊಳಿ
ಬಸನಗೌಡ ಪಾಟೀಲ್ ಯತ್ನಾಳ್-ರಮೇಶ್ ಜಾರಕಿಹೊಳಿ
Updated on

ಬೆಳಗಾವಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದು, ಇದರ ಬೆನ್ನಲ್ಲೇ ಯತ್ನಾಳ್ ಅವರಿಗೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಬೆಂಬಲ ನೀಡಿದ್ದಾರೆ.

ಯತ್ನಾಳ್ ಯಾವುದೇ ತಪ್ಪು ಮಾಡಿಲ್ಲ ಮತ್ತು ನೋಟಿಸ್‌ಗೆ ಪರಿಣಾಮಕಾರಿಯಾಗಿ ಉತ್ತರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಉಭಯ ನಾಯಕರು ಹೇಳಿದ್ದಾರೆ.

ಯತ್ನಾಳ್ ಅವರಿಗೆ ನೀಡಲಾಗಿರುವ ನೋಟಿಸ್ ಬಗ್ಗೆ ನನಗೆ ತಿಳಿದಿದೆ. ಯತ್ನಾಳ್​ಗೆ ಶೋಕಾಸ್ ನೋಟಿಸ್ ಇಂದು ಬಂದಿದ್ದಲ್ಲ. ಎರಡು ದಿನಗಳ ಹಿಂದೆಯೇ ಬಂದಿದೆ. ಆದರೆ, ಮಾಧ್ಯಮಗಳಲ್ಲಿ ಇಂದು ತೋರಿಸುತ್ತಿದ್ದಾರೆ. ನಾವು ಯತ್ನಾಳ್​ ಬೆನ್ನಿಗೆ ನಿಲ್ಲುತ್ತೇವೆ. ಕೇಂದ್ರ ‌ನಾಯಕರ ಮನವೊಲಿಸುತ್ತೇವೆ. ನೋಟಿಸ್ ಬಹಳ ಮುಖ್ಯವಾದ ವಿಚಾರವಲ್ಲ. ಮಾಧ್ಯಮಗಳು ಅದರ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿಲ್ಲ. ಪಕ್ಷದಿಂದ ಸಾಂದರ್ಭಿಕವಾಗಿ ನೋಟಿಸ್ ಜಾರಿ ಮಾಡಲಾಗಿದೆ. ಕೆಲವು ನಾಯಕರು ಪಕ್ಷದ ನಾಯಕರ ವಿರುದ್ಧ ಮಾತನಾಡಿದಾಗ ನಾಯಕತ್ವವು ನೋಟಿಸ್ ಜಾರಿ ಮಾಡಿ, ಸ್ಪಷ್ಟನೆ ಕೇಳುವುದು ಸಹಜ ಎಂದು ರಮೇಶ್ ಜಾರಕಿಹೊಳಿಯವರು ಹೇಳಿದ್ದಾರೆ.

ಇದೇ ವೇಳೆ ವಿಜಯೇಂದ್ರ ವಿರುದ್ಧ ಯತ್ನಾಳ್ ನೀಡಿರುವ ಹೇಳಿಕೆಗಳನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡ ಅವರು, ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಆಗುತ್ತಿಲ್ಲ. ಅಧ್ಯಕ್ಷ ಸ್ಥಾನದಿಂದ ತಕ್ಷಣವೇ ಅವರನ್ನು ಬದಲಾವಣೆ ಮಾಡಬೇಕು. ಯಡಿಯೂರಪ್ಪ ಹುಟ್ಟು ಹೋರಾಟಗಾರ. ಆದರೆ ವಿಜಯೇಂದ್ರ ಯಡಿಯೂರಪ್ಪ ಅವರ ಕಾಲಿನ ಧೂಳಿಗೂ ಸಮನಲ್ಲ. ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿಕೊಂಡು ಓಡಾಡುವ ವಯಸ್ಸು ಅವರದ್ದು. ಇನ್ನೂ ನಾಲ್ಕು ವರ್ಷಗಳ ಬಳಿಕ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕಿತ್ತು ಎಂದು ತಿಳಿಸಿದರು.

ಬಳಿಕ ರಾಜ್ಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಸೋಲನ್ನು ಪ್ರಶ್ನಿಸಿದ ರಮೇಶ್ ಅವರು, ಎಲ್ಲಾ ಮೂರು ಪ್ರಮುಖ ಸ್ಥಾನಗಳನ್ನು ಕಳೆದುಕೊಂಡಿದ್ದಕ್ಕಾಗಿ ನಾಯಕರು ನಾಚಿಕೆಪಡಬೇಕು ಎಂದು ಹೇಳಿದರು.

ಬಸನಗೌಡ ಪಾಟೀಲ್ ಯತ್ನಾಳ್-ರಮೇಶ್ ಜಾರಕಿಹೊಳಿ
ಬಿಜೆಪಿ ಬಣ ಜಗಳ: ಹೈಕಮಾಂಡ್ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೇನು?

ಪಕ್ಷವು ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬ ವಿಜಯೇಂದ್ರ ಅವರ ಹೇಳಿಕೆ ದುರದೃಷ್ಟಕರ ಸಂಗತಿ. ವಿಜಯೇಂದ್ರ ಅವರು ಪಕ್ಷದ ಉನ್ನತ ಹುದ್ದೆಯಲ್ಲಿರಲು ಅನರ್ಹರು ಎಂದು ಪ್ರತಿಪಾದಿಸಿದರು.

ಪಕ್ಷದ ಬೆಳವಣಿಗೆಗೆ ನಾನು ಮತ್ತು ಯತ್ನಾಳ್ ಶ್ರಮಿಸುತ್ತಿದ್ದು, ಶೋಕಾಸ್ ನೋಟಿಸ್‌ಗೆ ಯತ್ನಾಳ್ ಸೂಕ್ತವಾಗಿ ಉತ್ತರಿಸಲಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ್​ ಅಥವಾ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಬೇಕೆಂದು ನಾನು ಹೇಳುತ್ತಿಲ್ಲ. ಒಂದೇ ಸಮುದಾಯಕ್ಕೆ ಸೀಮಿತವಾದವರಿಗೆ ಅಧ್ಯಕ್ಷ ನಮಗೆ ಬೇಡ. ಎಲ್ಲರನ್ನೂ ಸಮಾನವಾಗಿ ಕಾಣಲು ಸಮರ್ಥರಿದ್ದವರಿಗೆ ಮಾತ್ರ ಅಧ್ಯಕ್ಷ ಸ್ಥಾನ ಕೊಡಬೇಕು.

ನನ್ನ ಬೆನ್ನಿಗೆ ನಿಲ್ಲುವಂತೆ ವಿಜಯೇಂದ್ರ ಹಿಂದುಳಿದ ನಾಯಕರಿಗೆ ಬೆದರಿಸುತ್ತಿದ್ದಾರೆ. ವಿಜಯೇಂದ್ರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ‌ ಸಮುದಾಯದವರು. ಲಿಂಗಾಯತ, ಒಕ್ಕಲಿಗರು ಯಾರೂ ಇಲ್ಲ. ಪಾಪ ರೇಣುಕಾಚಾರ್ಯ ರಾಜಕೀಯ ‌ಅಸ್ತಿತ್ವಕ್ಕಾಗಿ ಅವರ ಜೊತೆಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಬೇಕು ಎಂದು ನಾನು ಬಹಿರಂಗವಾಗಿ ಹೇಳಲ್ಲ. ಆದರೆ, ಆಂತರಿಕ ಸಭೆ ಮಾಡಿ ಕೇಳಲಿ, ಆಗ ನನ್ನ ಅಭಿಪ್ರಾಯ ತಿಳಿಸುತ್ತೇನೆ" ಎಂದರು.

ದೆಹಲಿಯಲ್ಲಿ ನಾವು ಬಿಜೆಪಿ ನಾಯಕರನ್ನು ಭೇಟಿ ಆಗುವುದಿಲ್ಲ. ಅದೇ ರೀತಿ ದೂರು ಕೊಡಲು ಹೋಗುತ್ತಿಲ್ಲ. ವಕ್ಫ್ ಬೋರ್ಡ್ ವಿರುದ್ಧ ಜೆಪಿಎಸ್ ಕಮಿಟಿಗೆ ವರದಿ ಸಲ್ಲಿಸಲು ಹೋಗುತ್ತಿದ್ದೇವೆ. ಬಿಜೆಪಿ ಹೈಕಮಾಂಡ್ ಭೇಟಿ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಕುಮಾರ್ ಬಂಗಾರಪ್ಪ ಅವರು ಮಾತನಾಡಿ, ಯಾವ ಕಾರಣಕ್ಕೆ ನೋಟಿಸ್ ಕೊಟ್ಟಿದ್ದಾರೆ ಗೊತ್ತಿಲ್ಲ. ನೋಟಿಸ್ಗೆ ಯತ್ನಾಳ್ ಉತ್ತರ ಕೊಡುತ್ತಾರೆ. ವಕ್ಫ್ ವಿಚಾರವಾಗಿ ನೋಟಿಸ್ ಕೊಟ್ಟಿಲ್ಲ. ವೈಯಕ್ತಿಕವಾಗಿ ನೋಟಿಸ್ ನೀಡಿದ್ದಾರೆ. ವಕ್ಫ್ ವಿರುದ್ದದ ಹೋರಾಟಕ್ಕೂ ಈ ನೋಟಿಸ್ ಗೂ ಸಂಬಂಧವಿಲ್ಲ. ವಿಜಯೇಂದ್ರ ಎಷ್ಟು ಬಾರಿ ದೆಹಲಿಗೆ ಹೋಗಿದ್ದಾರೆ. ವಿಜಯೇಂದ್ರ ಅವರೇ ನೋಟಿಸ್ ಕೊಡಿಸಿದ್ದಾರೆ ಅನ್ನೋಕೆ ಆಗಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ಸತತವಾಗಿ ನಡೆಯುತ್ತಿದೆ. ಸಂಪೂರ್ಣ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ ಹಗುರವಾಗಿ ಚುನಾವಣೆ ತೆಗೆದುಕೊಂಡವು ಅನ್ನೋದು ಅಕ್ಷಮ್ಯ ಅಪರಾಧ. ನಮ್ಮ ಅಮಾಯಕ ಕಾರ್ಯಕರ್ತರನ್ನ ವಜಾ ಮಾಡಲಾಗಿದೆ. ಹೀಗೆ ಮಾಡಿದರೆ ಪಕ್ಷಸಂಘಟನೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com