
ಮೈಸೂರು: ಜೆಡಿಎಸ್ ಮುಗಿಸುವುದು ಬಿಜೆಪಿಯವರ ಉದ್ದೇಶವಾಗಿದ್ದು, ಅದಕ್ಕಾಗಿ ವ್ಯವಸ್ಥಿತ ರೀತಿಯಲ್ಲಿಯೇ ಸ್ಕೆಚ್ ಹಾಕಿದ್ದಾರೆ. ಭವಿಷ್ಯದಲ್ಲಿ ಜೆಡಿಎಸ್ ಪಕ್ಷವನ್ನು ನುಂಗಿ ಹಾಕುತ್ತಾರೆ. ಆದರೆ, ‘ಜೆಡಿಎಸ್ ಉಳಿಯಬೇಕೆಂದು ಅಸೆಪಡುತ್ತೇನೆ’ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭಾನುವಾರ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಜೆಡಿಎಸ್ ಪಕ್ಷವನ್ನು ಮುಗಿಸಲು ವ್ಯವಸ್ಥಿತವಾಗಿ ಸ್ಕೆಚ್ ಹಾಕಿದೆ ಆದರೆ, ನಾನು ರಾಜ್ಯದಲ್ಲಿ ಜೆಡಿಎಸ್ ಪಕ್ಷ ಉಳಿಯಬೇಕೆಂದು ಅಸೆ ಪಡುತ್ತೇನೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ತ್ರಿಕೋನ ಸ್ಪರ್ಧೆ ಇದ್ದಾಗ 97 ಸಾವಿರ ಮತ ಪಡೆದಿದ್ದರು. ಬಿಜೆಪಿ-ಜಾತ್ಯತೀತ ಜನತಾದಳ ಒಂದಾದ ಮೇಲೆ 10 ಸಾವಿರ ಮತಗಳಾದರೂ ಹೆಚ್ಚಾಗಬೇಕಿತ್ತು. ಹೇಗೆ 85 ಸಾವಿರ ಮತಗಳಿಗೆ ಇಳಿಯಿತು? ಬಿಜೆಪಿಯ ಮತಗಳು ಎಲ್ಲಿ ಹೋದವು? ಎಂದು ಪ್ರಶ್ನಿಸಿದರು.
ಬಿಜೆಪಿಯ ಒಂದು ಮತವೂ ಜೆಡಿಎಸ್‌ಗೆ ಬಂದಿಲ್ಲ. ಬಿಜೆಪಿಯವರು ಬೇಕೆಂದೇ ಕುಮಾರಸ್ವಾಮಿ ಮಗನನ್ನು ಕಣಕ್ಕಿಳಿಸಿ ಮತವನ್ನು ಕಾಂಗ್ರೆಸ್‌ಗೆ ಹಾಕಿಸಿದ್ದಾರೆ. ಬಿಜೆಪಿಯವರು ಜೆಡಿಎಸ್ ಬೆನ್ನಿಗೆ ಚೂರಿ ಹಾಕಿದ್ದಾರೆ. 25 ಸಾವಿರ ಮತಗಳಿಂದ ಯೋಗೇಶ್ವರ್ ಗೆಲ್ಲಬೇಕಾದರೆ ಯಾವ್ಯಾವ ಮೂಲೆಯಿಂದ ಸಹಾಯ ಬಂದಿದೆ ನೀವೆ ಆಲೋಚನೆ ಮಾಡಿ. ಯೋಗೇಶ್ವರ್ ಗೆಲುವಿಗೆ ಬಿಜೆಪಿ ಪರೋಕ್ಷವಾಗಿ ಸಹಾಯ ಮಾಡಿದೆ. ಬಿಜೆಪಿಯ ಉದ್ದೇಶ ಜನತದಾಳವನ್ನು ಮುಗಿಸುವುದೇ ಆಗಿದೆ. ಭವಿಷ್ಯದಲಿ ಜೆಡಿಎಸ್ ಪಕ್ಷವನ್ನು ನುಂಗಿ ಹಾಕುತ್ತದೆ ಎಂದು ಆರೋಪಿಸಿದರು.
ಸಿಎಂ ಸ್ಥಾನದ ರೇಸ್‌ನಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಿದ, ಯಾರ್ಯಾರ ಜೀವನದಲ್ಲಿ ಏನೇನು ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ. ಸರ್ಕಾರ ಮಾಡುತ್ತಿರುವ ಕೆಲಸಗಳ ಬಗ್ಗೆ ಚರ್ಚೆ ಆಗಬೇಕೇ ಹೊರತು, ನಿತ್ಯವೂ ಅಧಿಕಾರದ ಬಗ್ಗೆ ಚರ್ಚೆ ಸರಿಯಲ್ಲ. ರಾಜಕೀಯದಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳು ಆಗುತ್ತಿರುತ್ತವೆ. ಅಧಿಕಾರ ಶಾಶ್ವತವಲ್ಲ. ಸಮಯ ಬಂದಾಗ ಏನಾಗಬೇಕೋ ಅದು ಆಗುತ್ತದೆ’ ಎಂದುಕ ಹೇಳಿದರು.
ಸಿದ್ದರಾಮಯ್ಯ–ಶಿವಕುಮಾರ್ ನೇತೃತ್ವದಲ್ಲಿ ಜನಪರವಾದ ಕೆಲಸ ಮಾಡುತ್ತಿದ್ದೇವೆ. ಈಚೆಗೆ ನಡೆದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವೇ ಅದಕ್ಕೆ ಸಾಕ್ಷಿ. ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಅಲ್ಲಿನ ಕುಟುಂಬ ರಾಜಕಾರಣವನ್ನು ಜನರು ಕಡೆಗಣಿಸಿದ್ದಾರೆ. ಜನರಿಗೆ ಕಾಂಗ್ರೆಸ್ ಬಗ್ಗೆ ಒಳ್ಳೆಯ ಭಾವನೆ ಬಂದಿದೆ ಎಂದು ಹೇಳಿದರು
Advertisement