
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಬಂಧಿಸಿರುವುದನ್ನು ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾಟಕ ಅಕ್ಷರಶಃ ರೌಡಿಗಳ ರಾಜ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಬಂಧನವಾಗಿ ಪೊಲೀಸರ ವಶದಲ್ಲಿರುವ ಒಬ್ಬ ಪರಿಷತ್ ಸದಸ್ಯನಿಗೆ ತಮ್ಮ ಸರ್ಕಾರ ರಕ್ಷಣೆ ಕೊಡಲು ಆಗುತ್ತಿಲ್ಲ ಅಂದಮೇಲೆ ನಿಮ್ಮ ಸರ್ಕಾರವನ್ನು ರೌಡಿಗಳು, ಗೂಂಡಾಗಳು ಹೈಜಾಕ್ ಮಾಡಿರಬೇಕು ಅಥವಾ ಸರ್ಕಾರದ ಭಾಗವಾಗಿರುವವರೇ ರೌಡಿಗಳು, ಗೂಂಡಾಗಳಾಗಿರಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ದೇಶದ್ರೋಹಿಗಳು ಯಾವುದೇ ಕಾನೂನು ಕ್ರಮವಿಲ್ಲದೆ ಹೊರಗಿದ್ದಾರೆ. ಆ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಂಡು, ಸುದ್ದಿ ಬಿತ್ತರಿಸಿದ ಮಾಧ್ಯಮಗಳ ಮೇಲೆ ಹೌಹಾರಿದವರು ಇನ್ನೂ ರಾಜಾರೋಷವಾಗಿ ಮಂತ್ರಿಗಳಾಗಿ ಗೂಟದ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ಎರಡನೇ ವಿಭಾಗದ ಸಹಾಯಕ (ಎಸ್‌ಡಿಎ) ರುದ್ರೇಶ್ ಯಾದವಣ್ಣನವರ್ ಅವರ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಪಿಎ ವಿರುದ್ಧ ದೂರಿದೆ. ಆ ತನಿಖೆ ಎಲ್ಲಿವರೆಗೆ ಬಂತು. ಎಷ್ಟು ಜನರ ಬಂಧನವಾಗಿದೆ?’ ಎಂದು ಅಶೋಕ ಪ್ರಶ್ನಿಸಿದ್ದಾರೆ. ನಾಚಿಕೆ ಆಗಬೇಕು ಈ ಗೂಂಡಾಗಳ, ರೌಡಿಗಳ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಅಶೋಕ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಬೆಳಗಾವಿ ರಿಪಬ್ಲಿಕ್‌ಗೆ ತಾವು ಮುಖ್ಯಮಂತ್ರಿಗಳಲ್ಲವೇ?, ಗೃಹ ಸಚಿವ ಜಿ.ಪರಮೇಶ್ವರ ಅವರೇ, ಬೆಳಗಾವಿ ರಿಪಬ್ಲಿಕ್‌ಗೆ ತಾವು ಗೃಹ ಸಚಿವರಲ್ಲವೇ?, ಬೆಳಗಾವಿಯನ್ನು ಕಾಂಗ್ರೆಸ್ ಪಕ್ಷದ ರೌಡಿಗಳಿಗೆ, ಗೂಂಡಾಗಳಿಗೆ ದತ್ತು ಕೊಟ್ಟಿದ್ದೀರಾ? ಏನಾಗುತ್ತಿದೆ ಬೆಳಗಾವಿಯಲ್ಲಿ? ಎಂದು ಅವರು ಪ್ರಶ್ನಿಸಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ಸಿ.ಟಿ.ರವಿ ಅವರನ್ನ ಬಿಟ್ಟಿದ್ದೇ ಪುಣ್ಯ ಅಂದರೆ ತಮ್ಮ ಮಾತಿನ ಅರ್ಥವೇನು? ಜೀವಂತವಾಗಿ ಬಿಟ್ಟಿದ್ದೇ ಪುಣ್ಯ ಅಂತಲಾ? ಇನ್ನೂ ಪ್ರಾಣ ತೆಗೆಯದೆ ಉಳಿಸಿರುವುದೇ ಪುಣ್ಯ ಆಂತಲಾ?ಅಥವಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರ ತಾಲಿಬಾನಿಗೆ ಸೇರಿದ್ದು ಅಂತಲಾ? ಅಥವಾ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ತಾಲಿಬಾನಿಗಳು ಅಂತಲಾ? ಕಾನೂನು ಕೈಗೆತ್ತುವ ರೌಡಿಗಳಿಗೆ, ಗೂಂಡಾಗಳಿಗೆ ನಿಮ್ಮ ಮಾತಿನಿಂದ ಏನು ಸಂದೇಶ ಹೋಗುತ್ತದೆ ಎನ್ನುವ ಪ್ರಜ್ಞೆ ತಮಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರೇ, ತಾವೊಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು. ರಾಜ್ಯದ ಉಪಮುಖ್ಯಮಂತ್ರಿಗಳು. ಮುಂದೊಂದು ದಿನ ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಾಣುತ್ತಿರುವವರು. ತಮ್ಮಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು. ತಾವು ಮುಖ್ಯಮಂತ್ರಿ ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಏನಾಗುತ್ತೆ ಅಂತ ತಮ್ಮ ಮಾತುಗಳೇ ಸೂಚನೆ ಕೊಡುತ್ತಿವೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎನ್ನುವುದನ್ನ ಮರೆಯಬೇಡಿ. ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಿ. ಕನಿಷ್ಠ ಪಕ್ಷ ಸಾರ್ವಜನಿಕವಾಗಿ ಮಾತನಾಡುವಾಗಲಾದರೂ ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡಿ ಎಂದಿದ್ದಾರೆ.
Advertisement