CM Siddaramaiah, BY Vijayendra
ಸಿಎಂ ಸಿದ್ದರಾಮಯ್ಯ, ಬಿ.ವೈ. ವಿಜಯೇಂದ್ರ

ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಬಿಟ್ಟು, ದಲಿತರೊಬ್ಬರು ಸಿಎಂ ಆಗಲು ದಾರಿ ಮಾಡಿಕೊಡಿ: ಸಿದ್ದರಾಮಯ್ಯಗೆ ವಿಜಯೇಂದ್ರ

ಕಾಂಗ್ರೆಸ್ ಪಕ್ಷವು ಡಾ ಬಿಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿದ್ದರಾಮಯ್ಯ ಅವರು, 3 ತಿಂಗಳ ಹಿಂದೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು.
Published on

ಬೆಂಗಳೂರು: ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು’ ಬಿಟ್ಟು ದಲಿತರೊಬ್ಬರು ಸಿಎಂ ಆಗುವ ಹಾದಿಯನ್ನು ಸುಗಮಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗುರುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಡಾ ಬಿಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿದ್ದರಾಮಯ್ಯ ಅವರು, 3 ತಿಂಗಳ ಹಿಂದೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ, ಹಾಗೆ ಮಾಡಲಿಲ್ಲ. ಇನ್ನೂ ಸಮಯವಿದೆ. ನೀವು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ ರಾಜೀನಾಮೆ ನೀಡಿ ದಲಿತರೊಬ್ಬರು ಸಿಎಂ ಆಗಲು ಅವಕಾಶ ಮಾಡಿಕೊಡಿ. ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದುಸ ಹಾಗೂ ರಾಜಕೀಯ ಷಡ್ಯಂತ್ರ ಮಾಡುವುದನ್ನು ಬಿಡಿ. ದೇಶದ ಜನರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.

ಅಂಬೇಡ್ಕರ್ ಅವರ ಜೀವಿತಾವಧಿಯ ಕಾಲದಲ್ಲಿ ಅವರನ್ನು ನಿರಂತರ ಅಪಮಾನಿಸಿ, ಅವರ ಅರ್ಹತೆ, ವಿದ್ವತ್ತನ್ನು ಗೌರವಿಸದೇ ಅವರನ್ನು ರಾಜಕೀಯವಾಗಿ ಸಾಮಾಜಿಕವಾಗಿ ತುಳಿದ ಕಾಂಗ್ರೆಸ್ ಶೋಷಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಇದುವರೆಗೂ ಅಧಿಕಾರದ ಸವಿ ಅನುಭವಿಸುತ್ತಾ ಬಂದಿದೆ. ಅಂಬೇಡ್ಕರ್ ಅವರ ನಿಧನದ ನಂತರ ಅವರ ಪಾರ್ಥಿವ ಶರೀರ ಮಣ್ಣು ಮಾಡಲು ದೆಹಲಿಯಲ್ಲಿ ಕನಿಷ್ಠ ಅಡಿಯ ಜಾಗವನ್ನು ನೀಡದೆ ಮುಂಬೈಗೆ ಅವರ ದೇಹ ಸಾಗಿಸುವ ವ್ಯವಸ್ಥೆಯನ್ನೂ ಮಾಡದೆ ಅವರನ್ನು ತಾತ್ಸಾರವಾಗಿ ನೋಡಿಕೊಂಡ ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಇಲ್ಲ. ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಿದ ಹೆಗ್ಗಳಿಕೆ ಭಾರತೀಯ ಜನತಾ ಪಾರ್ಟಿಯದ್ದು. ಅಂಬೇಡ್ಕರ್ ಅವರ ಇತಿಹಾಸ ಮುಂದಿನ ಭವಿಷ್ಯದೊಂದಿಗೆ ತಿಳಿಯುವಂತೆ ಸಂವಿಧಾನ ದಿನವನ್ನು ಆಚರಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು ಭಾರತೀಯ ಜನತಾ ಪಾರ್ಟಿ.

CM Siddaramaiah, BY Vijayendra
ಅಧಿವೇಶನದ ಮಧ್ಯೆಯೇ ದಿಢೀರ್​ ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ

ಅಮಿತ್ ಶಾ ಅವರು ಕಾಂಗ್ರೆಸಿಗರು ಅಂದು ಅಂಬೇಡ್ಕರ್ ಅವರನ್ನು ಅವಮಾನಿಸಿ ಇಂದು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ಪಟಿಸುತ್ತಿರುವ ಕಾಂಗ್ರೆಸ್ಸಿಗರ ಗೋಮುಖ ವ್ಯಾಘ್ರತನವನ್ನು ಬಯಲು ಮಾಡುವ ನಿಟ್ಟಿನಲ್ಲಿ ಆಡಿದ ಮಾತುಗಳನ್ನು ತಿರುಚುವ ಮೂಲಕ ಅಪಪ್ರಚಾರ ನಡೆಸಿ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟಿರುವ ಕಾಂಗ್ರೆಸ್ಸಿಗರ ನಡೆ ನಾಚಿಕೆಗೇಡಿತನದ ಪರಮಾವಧಿಯಾಗಿದೆ ಎಂದು ತಿಳಿಸಿದರು.

ವಿಶ್ವ ಕಂಡ ಶ್ರೇಷ್ಠ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಡಿಗಡಿಗೂ ಅವಮಾನಿಸಿ ಅವರ ಸಾವಿನ ನಂತರವೂ ಅವರನ್ನು ತಾತ್ಸಾರವಾಗಿ ಕಂಡ ಕಾಂಗ್ರೆಸ್ಸಿಗರು ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿ ಸುರಿಸುತ್ತಿರುವ ಮೊಸಳೆ ಕಣ್ಣೀರಿನ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ವ್ಯಂಗ್ಯಭರಿತ ಮಾತುಗಳಿಂದ ಕಾಂಗ್ರೆಸ್ ಬಂಡವಾಳ ಬಯಲು ಮಾಡಿದ್ದಾರೆ. ಇದನ್ನು ಸಹಿಸಿಕೊಳ್ಳಲಾರದೆ ಹತಾಶ ಮನಸ್ಥಿತಿಯಿಂದ ವಿಡಿಯೋ ಎಡಿಟ್ ಮಾಡಿಕೊಂಡು ವಿಷಯವನ್ನು ತಿರುಚಿ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟಿರುವ ಕಾಂಗ್ರೆಸ್ಸಿಗರ ನೀಚ ಪ್ರವೃತ್ತಿ ಅಂಬೇಡ್ಕರ್ ರವರನ್ನು ಅವಮಾನಿಸುವುದೇ ಆಗಿದೆ, ಇದಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.

ಅಂದು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ಸಿಗರು, ನೀವೂ ಕೂಡ ಮುಖ್ಯಮಂತ್ರಿ ಆಗಲಿದ್ದ ದಲಿತ ಮುಖಂಡರೊಬ್ಬರನ್ನು 2013ರ ಚುನಾವಣೆಯಲ್ಲಿ ಸೋಲಿಸಿ ಅವರ ಅವಕಾಶ ಕಸಿದುಕೊಂಡಿದ್ದು ಇತಿಹಾಸದ ಪುಟಗಳಲ್ಲಿ ಬಹಿರಂಗ ಸತ್ಯವಾಗಿ ಉಳಿದಿದೆ. ಈಗಲೂ ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶದ ಬಾಗಿಲು ತೆರೆಯದೆ ಭ್ರಷ್ಟತೆಯ ಮೂಟೆ ಹೊತ್ತು ಮುಖ್ಯಮಂತ್ರಿ ಸ್ಥಾನವನ್ನು ಭಂಡತನದಿಂದ ಆಕ್ರಮಿಸಿಕೊಂಡಿರುವ ನಿಮಗೆ ಅಂಬೇಡ್ಕರ್ ವಾದ, ಸಮಾಜವಾದ, ಸಾಮಾಜಿಕ ನ್ಯಾಯಗಳ ಬಗ್ಗೆ ಮಾತನಾಡುವ ಹಕ್ಕು ಕಳೆದುಕೊಂಡಿದ್ದೀರಿ, ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣದ ಕಾರ್ಯಕ್ಕಾಗಿ ಮೀಸಲಿಟ್ಟ ಹಣ ಲೂಟಿಯಾಗಲು ಕಾರಣರಾಗಿದ್ದೀರಿ, ನಿಮ್ಮ ಪಂಚಭಾಗ್ಯಗಳಿಗೆ ವಿನಿಯೋಗಿಸಲು ಬಳಸಿಕೊಂಡಿದ್ದೀರಿ. ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರು ಬಳಸಿಕೊಂಡು ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುವ ಬದಲು ಈಗಲಾದರೂ ಪರಿಶಿಷ್ಟರು ಹಾಗೂ ಹಿಂದುಳಿದವರಿಗಾಗಿ ಏನನ್ನಾದರೂ ಯೋಜನೆ ಕಾರ್ಯಗತಗೊಳಿಸಿ ನಿಮಗಂಟಿರುವ ಕಳಂಕ ತೊಳೆದುಕೊಳ್ಳಲು ಪ್ರಯತ್ನಿಸಿ ಎಂದು ತಿಳಿಸಿದ್ದಾರ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com