ಅಂಬೇಡ್ಕರ್ ಪರಂಪರೆಯನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ: ಬಿ.ಎಲ್ ಸಂತೋಷ್

ನರೇಟಿವ್‌ಗಳನ್ನು ಸೃಷ್ಟಿ ಮಾಡುವಲ್ಲಿ ಕಾಂಗ್ರೆಸ್ ನಿಪುಣವಾಗಿದೆ. ಅದಕ್ಕಾಗಿ ಅನೇಕ ಗಂಜಿಕೇಂದ್ರಗಳನ್ನು ಕಾಂಗ್ರೆಸ್ ಸರಕಾರ ಸೃಷ್ಟಿಸಿಕೊಂಡಿದೆ.
ಬಿ.ಎಲ್.ಸಂತೋಷ್
ಬಿ.ಎಲ್.ಸಂತೋಷ್
Updated on

ಮಂಗಳೂರು: 1975 ರ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶದ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದ್ದು, ಆ ಸಂದರ್ಬಧಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸದಸ್ಯರನ್ನು ಜೈಲಿಗೆ ಹಾಕಲಾಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ತಿರುಗೇಟು ನೀಡಿದರು.

ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನರೇಟಿವ್‌ಗಳನ್ನು ಸೃಷ್ಟಿ ಮಾಡುವಲ್ಲಿ ಕಾಂಗ್ರೆಸ್ ನಿಪುಣವಾಗಿದೆ. ಅದಕ್ಕಾಗಿ ಅನೇಕ ಗಂಜಿಕೇಂದ್ರಗಳನ್ನು ಕಾಂಗ್ರೆಸ್ ಸರಕಾರ ಸೃಷ್ಟಿಸಿಕೊಂಡಿದೆ. ಆರ್‌ಎಸ್‌ಎಸ್‌ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೇಯೇ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸುತ್ತಿದ್ದಾರೆ. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಸೂತ್ರದಾರರ ಪಾತ್ರವನ್ನು ಆರ್‌ಎಸ್‌ಎಸ್ ಸ್ವಯಂಸೇವಕರು ವಹಿಸಿದ್ದರು. ಅಂಬೇಡ್ಕರ್ ಅವರನ್ನು ಗುತ್ತಿಗೆ ಪಡೆದವರಂತೆ ಕಾಂಗ್ರೆಸ್ ಮುಖಂಡರು ಮಾತನಾಡುತ್ತಿದ್ದಾರೆ. ಅಂಬೇಡ್ಕರ್ ದೇಶದ ಎಲ್ಲರಿಗೂ ಸೇರಿದವರು. ನೆಹರೂ, ಇಂದಿರಾ ಗಾಂಧಿ ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡರು. ಅವರಿಗೆ ಅಂಬೇಡ್ಕರ್ ನೆನಪಾಗಲಿಲ್ಲ. ಬಿಜೆಪಿ ಬೆಂಬಲದೊಂದಿಗೆ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲಾಯಿತು. ಸಂವಿಧಾನದ ಸ್ವರೂಪವನ್ನೇ ಬದಲಾಯಿಸಿದ್ದು ನೆಹರೂ ಕುಟುಂಬ ಎಂದು ವಾಗ್ದಾಳಿ ನಡೆಸಿದರು.

ಸಂವಿಧಾನವನ್ನು ಖರೀದಿ ಮಾಡಿ ಬ್ರಾಂಡ್ ಮಾಡಿಟ್ಟುಕೊಂಡವರು ಅದನ್ನ ಕೇವಲ ಭಾಷಣಕ್ಕಾಗಿ ಮಾತ್ರ ಬಳಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕರು ಅಂಬೇಡ್ಕರ್, ಸಂವಿಧಾನವನ್ನು ತಾವೇ ಕಾಂಟ್ರಾಕ್ಟ್ ತಗೊಂಡಿದ್ದೇವೆ ಅನ್ನೋ ರೀತಿ ಮಾತನಾಡುತ್ತಿದ್ದಾರೆ. ಆದ್ರೆ ಅಂಬೇಡ್ಕರ್ ಎಲ್ಲರಿಗೂ ಸೇರಿದವರಾಗಿದ್ದಾರೆ.

ಬಿ.ಎಲ್.ಸಂತೋಷ್
ಅಂಬೇಡ್ಕರ್ ವಿವಾದ: ಅಮಿತ್ ಶಾಗೆ ಹುಚ್ಚು ನಾಯಿ ಕಚ್ಚಿದೆ ಎಂದ ಪ್ರಿಯಾಂಕ್ ಖರ್ಗೆ

ಅಂಬೇಡ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ ಕಾಂಗ್ರೆಸ್‌ನಿಂದ ಯಾಕೆ ಹೊರಬಂದರು ಎಂಬುದು ಗೊತ್ತೇ ಇದೆ. ಕಾಂಗ್ರೆಸ್ ನ ವೋಟ್‌ಬ್ಯಾಂಕ್‌ನ ಹಪಾಹಪಿಗೆ ಬೇಸತ್ತು ಹೊರಬಂದರು. ಸಂವಿಧಾನದಲ್ಲಿ ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಪದಗಳ ಸೇರ್ಪಡೆಗೆ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಆದರೆ. ಅಂಬೇಡ್ಕರ್ ವಿರೋಧದ ನಡುವೆಯೂ ಜಾತ್ಯಾತೀತ, ಸಮಾಜವಾದ ಸೇರಿಸಿದ ಕಾಂಗ್ರೆಸ್‌ನವರು ಇಂದು ಕೇವಲ ಚುನಾವಣೆಗಾಗಿ ಮಾತ್ರ ನೆನಪು ಮಾಡಿಕೊಳ್ಳುತ್ತಿದ್ದಾರೆ.

ಇಂದು ಎಲ್ಲದಕ್ಕೂ ಅಂಬೇಡ್ಕರ್ ಜಪ ಮಾಡುವ ಕಾಂಗ್ರೆಸ್‌ನವರು ಹಿಂದೆ ಅಂಬೇಡ್ಕರ್‌ಗೆ ಅವಮಾನ ಮಾಡಿದರು, ಚುನಾವಣೆಯಲ್ಲಿ ಕುತಂತ್ರದಿಂದ ಸೋಲಿಸಿದರು. ಬದುಕಿದ್ದಾಗ ಬಿಡಿ ಅಂಬೇಡ್ಕರ್ ತೀರಿಕೊಂಡ ಮೇಲೆಯೂ ಅವರ ಪಾರ್ಥೀವ ಶರೀರವನ್ನು ದೆಹಲಿಯಲ್ಲಿ ಅಂತಿಮ ಸಂಸ್ಕಾರ ಮಾಡಲು ಕಾಂಗ್ರೆಸ್ ಅವಕಾಶ ಮಾಡಿಕೊಡಲಿಲ್ಲ, ಕಾಂಗ್ರೆಸ್ ಕಾಲದಲ್ಲಿ ಅಂಬೇಡ್ಕರ್ ಸ್ಮಾರಕ ನಿರ್ಮಾಣ ಮಾಡೋದಕ್ಕೂ ಸಹ ಸಾಧ್ಯವಾಗಲಿಲ್ಲ. ಅಂಬೇಡ್ಕರಗೆ ಅವಮಾನ ಮಾಡಿಕೊಂಡೇ ಬಂದಿರುವ ಕಾಂಗ್ರೆಸ್‌ಗೆ ಇಂದು ಅಂಬೇಡ್ಕರ್ ಹೆಸರು ಹೇಳಲು ಯಾವ ನೈತಿಕತೆ ಇದೆ? ಎಂದು ಹರಿಹಾಯ್ದರು.

ಬಿಜೆಪಿ-ಕಾಂಗ್ರೆಸ್ ನಡುವೆ ನಡೆವಳಿಕೆಯಲ್ಲಿ ಬಹಳ ವ್ಯತ್ಯಾಸವಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲು ಮಾಡುತ್ತಾರೆಂದು ಹೇಳುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬದಲಾಯ್ತಾ? ನಿಜವಾಗಿಯೂ ಸಂವಿಧಾನಕ್ಕೆ ಗೌರವ ಕೊಟ್ಟವರು ಬಿಜೆಪಿಯವರು. 370 ನೇ ವಿಧಿಯನ್ನು ಅಂಬೇಡ್ಕರ್ ಅವರ ವಿರೋಧದ ನಡುವೆಯೂ ನೆಹರು ಸೇರಿಸಿದರು. ಆದರೆ, ಈ ವಿಧಿಯನ್ನು ಕಿತ್ತೆಸೆಯುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ನಮ್ಮ ನಡೆವಳಿಕೆ ಏನು, ಕಾಂಗ್ರೆಸ್ ನಡೆವಳಿಕೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಸಂವಿಧಾನದ ಸ್ವರೂಪವನ್ನೇ ಬದಲಿಸಿದ್ದು ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬ. ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ಇದನ್ನು ಅರ್ಥಮಾಡಿಸೋಕೆ ಆಗೊಲ್ಲ.

ಒಂದಷ್ಟು ವಯಸ್ಸು ಆದ ಬಳಿಕ‌ ಏನೇ ಹೇಳಿದರೂ ಅರ್ಥ ಆಗೋದಿಲ್ಲ. ದೇಶ ಕಂಡಂತಹ ಡಿಕ್ಟೇಟರ್ ಚೀಫ್ ಇಂದಿರಾ ಗಾಂಧಿ. ಎಮರ್ಜೆನ್ಸಿ ಟೈಮ್‌ನಲ್ಲಿ ಸಿದ್ದರಾಮಯ್ಯನವರು ಇಂದಿರಾಗಾಂಧಿಗೆ ಬಾಯಿಗೆ ಬಂದಹಾಗೆ ಬೈದಿದ್ರು. ಆದರೆ, ಅದೇ ಸಿದ್ದರಾಮಯ್ಯ ಇವತ್ತು ಇಂದಿರಾ ಗಾಂಧಿಗೆ ಜೈ ಎನ್ನುತ್ತಿದ್ದಾರೆ. ಅದೇ ಸಿದ್ದರಾಮಯ್ಯ ಇಂದು ಅವರದ್ದೇ ಫೋಟೊ ಹಾಕಿ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ‌ ಮಾಡಿರುವ ಅನ್ಯಾಯಗಳು ಒಂದೆರಡಲ್ಲ ಅನೇಕ ಇವೆ. ತಮ್ಮ ಆಳ್ವಿಕೆಯ ಕಾಲದಲ್ಲಿ ಎಲ್ಲವನ್ನೂ ಧ್ವಂಸ ಮಾಡಿದವರು ಕಾಂಗ್ರೆಸ್ ನವರೇ ಎಂದು ಹರಿಹಾಯ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com