
ಬೆಂಗಳೂರು/ಬೆಳಗಾವಿ: ಯಾರ ನಿರ್ದೇಶನದ ಮೇರೆಗೆ ಠಾಣೆಯಿಂದ ಠಾಣೆಗೆ ಸಿ.ಟಿ ರವಿಯನ್ನು ಸುತ್ತಾಡಿಸಿದ್ದಾರೆ ಗೊತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಶನಿವಾರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಹೇಳಿಕೆ ನೀಡಿದ ಆರೋಪದ ಮೇಲೆ ರವಿಯನ್ನು ಬಂಧಿಸಲಾಗಿತ್ತು. ಗುರುವಾರ ರಾತ್ರಿಯೇ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೆ. ಪೊಲೀಸರು ಸೂಚನೆಯಂತೆ ನಡೆದಿದ್ದರೆ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು.
ರವಿ ಅವರು ಯಾವುದೇ ಅವಹೇಳನಕಾರಿ ಪದಗಳನ್ನು ಬಳಸಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಈ ಪ್ರಕರಣ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ನಡೆದಾಗ ಸಿ.ಟಿ ರವಿಯನ್ನು ಮಾರ್ಷಲ್ ಗಳು ರಕ್ಷಣೆ ಮಾಡಿದ್ದಾರೆ. ಸೌಧದ ಒಳಗೆ ಅನೇಕ ಕಾರ್ಯಕರ್ತರು ಇರ್ತಾರೆ, ಇವರು ಇಂಥವರೇ ಅಂತಾ ಹೇಳುವುದು ಕಷ್ಟ. ದೂರು ದಾಖಲಾದ ಬಳಿಕವೇ ಸಿ.ಟಿ ರವಿ ಬಂಧನವಾಗಿದೆ ಎಂದು ತಿಳಿಸಿದರು.
ಸಿ.ಟಿ ರವಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಖಾನಾಪುರದಿಂದ ಶಿಫ್ಟ್ ಮಾಡಿದ್ದರು. ಯಾರ ನಿರ್ದೇಶನ ಮೇರೆಗೆ ಸಿ.ಟಿ ರವಿಯನ್ನು ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ ನಂಗೆ ಗೊತ್ತಿಲ್ಲ. ಸಿ.ಟಿ ರವಿಯನ್ನು ರಾತ್ರಿಯೇ ಕೋರ್ಟ್‌ಗೆ ಹಾಜರು ಮಾಡುವಂತೆ ನಾನು ಪೊಲೀಸರಿಗೆ ಹೇಳಿದ್ದೆ. ಬೆಳಗಾವಿ ಪೊಲೀಸರು ಅಷ್ಟು ಮಾಡಿದ್ರೆ ಇಷ್ಟೇಲ್ಲ ಆಗುತ್ತಿರಲಿಲ್ಲ, ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಮೊದಲ ಘಟನೆ ಇದು. ಹೀಗಾಗಿ ಅನೇಕ ಗೊಂದಲಗಳು ಸೃಷ್ಟಿಯಾಗಿವೆ ಎಂದರು.
ಇದೇ ವೇಳೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬಿಜೆಪಿಯವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆಂದು ಆರೋಪಿಸಿದರು.
ರವಿ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆಯಷ್ಟೇ ಕೆಟ್ಟದಾಗಿ ಮಾತನಾಡಿಲ್ಲ, ಸಿದ್ದರಾಮಯ್ಯನವರ ಮೇಲೂ ಕೀಳು ಮಾತುಗಳನ್ನಾಡಿದ್ದಾರೆ, ಸದನದಲ್ಲಿ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ, ಬಿಜೆಪಿ ನಾಯಕರು ಅವರ ನಡತೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಕಾಂಗ್ರೆಸ್ ನಾಯಕರು ಇಂತಹ ಹೇಳಿಕೆ ನೀಡಿದ್ದರೆ ನಾನು ಖಂಡಿಸುತ್ತಿದ್ದೆ, ಆದರೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ತಮ್ಮ ಪಕ್ಷದ ನಾಯಕರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆಂದು ಕಿಡಿಕಾರಿದರು.
Advertisement