
ಮೈಸೂರು: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಬಗ್ಗೆ ಸಿ.ಟಿ. ರವಿ ಅವರು ‘ಆ’ ಮಾತು ಹೇಳಿದ್ದು ಸತ್ಯ. ಅದಕ್ಕೆ ನಾನೇ ಸಾಕ್ಷಿ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆ ಪದವನ್ನು ಬಳಸಿಯೇ ಇಲ್ಲ ಎಂದು ರವಿ ಹೇಳುತ್ತಿದ್ದಾರೆ. ಅವರು ಬಳಸಿದ್ದು ಫ್ರಸ್ಟ್‌ರೇಟ್ ಎಂಬ ಪದವಲ್ಲ. ಅವರು ಬಳಸಿದ್ದು ಅಶ್ಲೀಲ ಪದ. ಅದಕ್ಕೆ ನಾನೇ ಸಾಕ್ಷಿ ಎಂದು ಹೇಳಿದರು.
ಸಚಿವೆಗೆ ಅಶ್ಲೀಲ ಪದ ಬಳಸಿದ್ದನ್ನು ಕೇಳಿಸಿಕೊಂಡು ಒಂದು ಕ್ಷಣ ನಾನೇ ಗಾಬರಿಯಾದೆ. ಏನಿದು, ಇಂಥ ಪದಗಳನ್ನು ಬಳಸುತ್ತಿದ್ದಾರಲ್ಲಾ ಎಂದುಕೊಂಡೆ. ಇದೀಗ ಅನುಕಂಪ ಗಿಟ್ಟಿಸಿಕೊಳ್ಳಲು ನಾಟಕ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಾನ– ಮರ್ಯಾದೆ ಏನಿಲ್ಲ. ಹೀಗಾಗಿ, ಅವರು ರವಿ ಪರ ನಿಂತಿದ್ದಾರೆಂದು ಕಿಡಿಕಾರಿದರು.
ರವಿ ಎನ್‌ಕೌಂಟರ್‌ಗೆ ಪೊಲೀಸರು ಯತ್ನಿಸಿದರು, ಕೊಲೆಗೆ ಯತ್ನ ನಡೆದಿತ್ತು ಎಂಬುದೆಲ್ಲಾ ಶುದ್ಧ ನಾಟಕ. ಬಿಜೆಪಿಯವರು ಈ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳೆಲ್ಲಾ ಕೇವಲ ನಾಟಕ ಎಂದು ಟೀಕಿಸಿದರು.
'ರಾಜ್ಯ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ'
ರಾಜ್ಯ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಶುರು ಮಾಡಿದೆ. ಸ್ಪೀಕರ್ ತನಿಖೆ ಮಾಡಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿ ನಮ್ಮದೇನು ಅಭ್ಯಂತರ ಇಲ್ಲ. ನಮ್ಮದೇ ತಪ್ಪಾಗಿದ್ದರು ನಾವು ಅದನ್ನು ಸ್ವೀಕರಿಸುತ್ತೇವೆ. ಅದು ಬಿಟ್ಟು ಸಿ.ಟಿ.ರವಿಗೆ ಟಾರ್ಚರ್ ಕೊಟ್ಟಿದ್ದು ಎಷ್ಟು ಸರಿ? ಸಿಟಿ ರವಿ ಅವರನ್ನು ಮಾಧ್ಯಮಗಳು ನಿರಂತರವಾಗಿ ಟ್ರ್ಯಾಕ್ ಮಾಡದೇ ಇದ್ದಿದ್ದರೆ ನಿಜಕ್ಕೂ ಸಂಕಷ್ಟಕ್ಕೆ ಸಿಲುಕುತ್ತಿದ್ದರು ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ರಾಜ್ಯ ಸರ್ಕಾರದಲ್ಲಿ ಬಹಳಷ್ಟು ಹುಳುಕು ಶುರುವಾಗಿವೆ. ಹುಳುಕು ಮುಚ್ಚಿಕೊಳ್ಳಲು ಈ ವಿಚಾರ ದೊಡ್ಡದು ಮಾಡುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕೇಂದ್ರದಲ್ಲಿ ಯಾರಿಗಾದರೂ ದೂರು ಕೊಡಲಿ ತೊಂದರೆ ಇಲ್ಲ. ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ರೀತಿಯ ರಾಜಕಾರಣ ಶುರುವಾಗಿರುವುದು ನನಗೆ ಬೇಸರ ಮೂಡಿಸುತ್ತಿದೆ. ಸದನದ ವಿಚಾರ ಸ್ಪೀಕರ್ ತೀರ್ಮಾನವೇ ಅಂತಿಮ. ಪ್ರಕರಣದಲ್ಲಿ ಯಾರದು ತಪ್ಪಿದೆ ಎಂಬುದನ್ನ ಸ್ಪೀಕರ್ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಲಿ. ಇದು ಸದನದ ವಿಚಾರ ಅದನ್ನು ಎಲ್ಲಿ, ಹೇಗೆ ಮಾತನಾಡಬೇಕು ಎಂಬುದಕ್ಕೆ ಕಾನೂನು ಇದೆ. ಅದರ ವ್ಯಾಪ್ತಿಯಲ್ಲಿ ಎಲ್ಲರೂ ಇರಬೇಕು ಎಂದು ತಿಳಿಸಿದರು.
ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿ. ಶಾ ಅವರ ಹೇಳಿಕೆಯನ್ನು ಕಾಂಗ್ರೆಸ್ ತಪ್ಪಾಗಿ ಅರ್ಥೈಸಿಕೊಂಡಿದೆ. ಪ್ರಧಾನಿ ಮೋದಿ ಸರ್ಕಾರದ ಬಗ್ಗೆ ಅವರಿಗೆ ಏನು ವಿಚಾರ ಇಲ್ಲ. ಬಿಜೆಪಿ ವಿರುದ್ಧ ಜನರನ್ನ ಎತ್ತಿಕಟ್ಟಲು ಈ ಕೆಲಸ ನಡೆಯುತ್ತಿದೆ. ಉತ್ತರ ಭಾರತದಲ್ಲಿ ಅಮಿತ್ ಶಾ ವಿರುದ್ಧ ಹೋರಾಟದ ಸದ್ದಿಲ್ಲ. ಜನರನ್ನ ಕಾಂಗ್ರೆಸ್ ದಡ್ಡರು ಎಂದು ಭಾವಿಸಿ ಸುಳ್ಳು ಹೇಳುತ್ತಿದೆ. ರಾಜ್ಯದ ಜನ ಕಾಂಗ್ರೆಸ್ ಪಕ್ಷದ ಸುಳ್ಳು ನಂಬಿ ದಡ್ಡರಾಗಿದ್ದಾರೆ. ಈ ಬಾರಿ ಆ ದಡ್ಡತನ ಮಾಡುವುದಿಲ್ಲ ಎಂದರು.
Advertisement