ಪ್ರತ್ಯೇಕ ರಾಷ್ಟ್ರ: ಡಿಕೆ.ಸುರೇಶ್ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಸಮರ್ಥನೆ; ಸಂಸದ ಸ್ಥಾನ ಅನರ್ಹತೆಗೆ ಬಿಜೆಪಿ ಆಗ್ರಹ

ಪ್ರತ್ಯೇಕ ರಾಷ್ಟ್ರ ಕುರಿತು ಸಂಸದ ಡಿ.ಕೆ.ಸುರೇಶ್ ನೀಡಿದ್ದ ಹೇಳಿಕೆಯೊಂದು ಕೈ ಪಾಳಯ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ಡಿಕೆ.ಸುರೇಶ್.
ಡಿಕೆ.ಸುರೇಶ್.

ಬೆಂಗಳೂರು: ಪ್ರತ್ಯೇಕ ರಾಷ್ಟ್ರ ಕುರಿತು ಸಂಸದ ಡಿ.ಕೆ.ಸುರೇಶ್ ನೀಡಿದ್ದ ಹೇಳಿಕೆಯೊಂದು ಕೈ ಪಾಳಯ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಡಿಕೆ.ಸುರೇಶ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಬಿಜೆಪಿ, ಸುರೇಶ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ಆಗ್ರಹಿಸಿದೆ.

ಡಿಕೆ.ಸುರೇಶ್ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸುವಂತೆ ಕೋರಿ ಬಿಜೆಪಿ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಅವರು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ಸಂಸದರು ಬೇಜವಾಬ್ದಾರಿ ಮತ್ತು ಭಾರತ ವಿರೋಧಿ ಹೇಳಿಕೆ ನೀಡಿದ್ದಾರೆ. "ಸಭಾಧ್ಯಕ್ಷರು ಬೋಧಿಸಿದ ಪ್ರಮಾಣ ವಚನವನ್ನು, ಸಾಂವಿಧಾನಿಕ ನಿಯಮಗಳು ಸುರೇಶ್ ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ.

ಇದಲ್ಲದೆ ಸುರೇಶ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ವಿಕಾಸ್.ಪಿ ಎಂಬವವರು ಮಂಗಳೂರಿನ 2ನೇ JMFC ನ್ಯಾಯಾಲಯಕ್ಕೆ ಸೆಕ್ಷನ್ 124 ಎ ಅಡಿ ಕ್ರಮ ಕೈಗೊಳ್ಳುವಂತೆ ದೂರು ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಎಫ್​ಐಆರ್ ದಾಖಲಿಸಿ ತನಿಖೆ ನಡೆಸಲು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಠಾಣಾಧಿಕಾರಿಯವರಿಗೆ ಆದೇಶಿಸುವಂತೆ ಮನವಿ ಸಲ್ಲಿಸಿದ್ದಾರೆ.

‘ಡಿ.ಕೆ ಸುರೇಶ್ ದೇಶ ವಿರೋಧಿ, ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲು ಮಂಗಳೂರು ಆಯುಕ್ತರಿಗೆ ಹಾಗೂ ಉತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಹಾಗೇ ಮಂಗಳೂರು ನ್ಯಾಯಾಲಯದಲ್ಲೂ ವಿನಂತಿ ಮಾಡಿದ್ದೇವೆ. ಡಿ.ಕೆ ಸುರೇಶ್ ಸಂಸದರಾಗಿದ್ದರೂ ಸಹ ಭಾರತವನ್ನು ವಿಭಜಿಸಬೇಕೆಂದಿದ್ದಾರೆ. ಈ ಮೂಲಕ ಪ್ರತ್ಯೇಕವಾದಿ ಶಕ್ತಿಗಳಿಗೆ ಕುಮ್ಮಕ್ಕು ಕೊಡುವ ಮೂಲಕ ದೇಶದ ಸಂವಿಧಾನಕ್ಕೆ ಅಗೌರವ ತೋರಿಸಿದ್ದಾರೆ. ಇದರಿಂದ ಪ್ರತ್ಯೇಕವಾದಿಗಳಿಗೂ ಡಿ.ಕೆ ಸುರೇಶ್ ಅವರಿಗೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದು ವಿಕಾಸ್ ಅವರು ಹೇಳಿದ್ದಾರೆ.

ಈ ನಡುವೆ ಡಿಕೆ.ಸುರೇಶ್ ಅವರ ಹೇಳಿಕೆಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸಮರ್ಥಿಸಿಕೊಂಡಿದ್ದಾರೆ.

ಡಿಕೆ.ಸುರೇಶ್ ಅವರ ಅಭಿಪ್ರಾಯದಲ್ಲಿ ಲಾಜಿಕೆ ಇದೆ. 2014ಕ್ಕಿಂತ ಮೊದಲು ನಾವು ಕಟ್ಟುತ್ತಿದ್ದ ತೆರಿಗೆ ಹಾಗೂ ನಮಗೆ ಬರುತ್ತಿರುವ ಅನುದಾನದ ಪ್ರಮಾಣಕ್ಕೆ ಹೋಲಿಸಿದರೆ ಈಗ ತೀವ್ರ ಅನ್ಯಾಯ ಆಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಹಣವನ್ನು ಸೂಕ್ತ ಪ್ರಮಾಣದಲ್ಲಿ ರಾಜ್ಯಕ್ಕೆ ಹಿಂದಿರುಗಿಸಬೇಕು. ಹೆಚ್ಚುವರಿ ಹಣವನ್ನು ಅವರು ಯಾವ ರಾಜ್ಯಕ್ಕಾದರೂ ನೀಡಲಿ. ಆದರೆ, ನಮ್ಮ ಹಣ ಬೇರೆ ರಾಜ್ಯಗಳಿಗೆ ನೀಡುತ್ತಿರುವ ಬಗ್ಗೆ ಅವರು ಹೇಳಿದ್ದಾರೆ. ಇದಕ್ಕೆ ನನ್ನ ಸಮರ್ಥನೆ ಇದೆ ಎಂದು ಹೇಳಿದ್ದಾರೆ.

ಹಾಗಾದರೆ ದೇಶ ವಿಭಜನೆ ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಪ್ರತ್ಯೇಕ ರಾಷ್ಟ್ರವಾಗಬೇಕು ಎಂಬುದನ್ನು ಸಮರ್ಥಿಸುವುದಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ ಅವರ ಒತ್ತಾಯದ ಹಿಂದೆ ಲಾಜಿಕೆ ಇದೆ. ಅದಕಕ್ಕೆ ನನ್ನ ಸಮರ್ಥನೆ ಇದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com