ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಹೈರಾಣ: ಸಚಿವರಿಗೆ ಬೇಡವಾಗಿದೆ 'ರಾಷ್ಟ್ರ ರಾಜಕಾರಣ'!

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಹಿರಿಯರು ಮತ್ತು ಸಚಿವರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಷ್ಟಕರವಾದಂತಿದೆ, ಇದರ ಪರಿಣಾಮವಾಗಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಲು ವಿಳಂಬವಾಗಿದೆ.
ಪ್ರಕಾಶ್ ಹುಕ್ಕೇರಿ, ಮಹಾದೇವಪ್ಪ ಮತ್ತು ಮುನಿಯಪ್ಪ
ಪ್ರಕಾಶ್ ಹುಕ್ಕೇರಿ, ಮಹಾದೇವಪ್ಪ ಮತ್ತು ಮುನಿಯಪ್ಪ

ಬೆಂಗಳೂರು: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಹಿರಿಯರು ಮತ್ತು ಸಚಿವರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಷ್ಟಕರವಾದಂತಿದೆ, ಇದರ ಪರಿಣಾಮವಾಗಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಲು ವಿಳಂಬವಾಗಿದೆ.

ಯಾವುದೇ ಹಿರಿಯ ನಾಯಕರು ಸ್ಪರ್ಧೆಗೆ ಸಮ್ಮತಿಸದಿದ್ದರೇ ಅಂತಿಮವಾಗಿ, ಪಕ್ಷವು ಹೊಸಬರನ್ನು ಕಣಕ್ಕಿಳಿಸುವ ಮೂಲಕ ಪ್ರಯೋಗ ಮಾಡಬೇಕಾಗಬಹುದು, ಆದರೆ ಚುನಾವಣಾ ಭವಿಷ್ಯದ ಮೇಲೆ ತನ್ನದೇ ಆದ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿರುವ ಮಾಜಿ ಸಚಿವ ಪ್ರಕಾಶ ಹುಕ್ಕೇರಿ, ‘ನಾನು ಹೈಕಮಾಂಡ್‌ ಒದೆಯುವ ಫುಟ್‌ಬಾಲ್‌ ಅಲ್ಲ’ ಎಂದಿದ್ದಾರೆ. ಹುಕ್ಕೇರಿ ಅವರು 2014ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಆದರೆ, 2019ರಲ್ಲಿ ಸೋಲುಂಡರು. ಈ ಬಾರಿ, “ಚುನಾವಣೆಗೆ ಸ್ಪರ್ಧಿಸುವಂತೆ ಹೈಕಮಾಂಡ್‌ ಒತ್ತಾಯಿಸಿದರೂ, ಅವರು ಯಾವುದೇ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ” ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದ್ದಾರೆ.

ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ ಮಹದೇವಪ್ಪ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಶನಿವಾರ ಹೇಳಿದ್ದಾರೆ. “10 ವರ್ಷಗಳ ಹಿಂದೆ ಸ್ಪರ್ಧೆಗೆ ಅವಕಾಶ ನೀಡಿದ್ದರೆ, ನಾನು ತಂಬಾ ಸಂತೋಷಪಡುತ್ತಿದೆ. ಆದರೆ, ಈಗ ನನಗೆ ಆ ಅವಕಾಶ ಬೇಡ. ನಾನು ಟಿಕೆಟ್‌ ಆಕಾಂಕ್ಷಿಯಲ್ಲ. ಎಂದಿಗೂ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ, ಯಾರೇ ಅಭ್ಯರ್ಥಿಯಾದರೂ, ಅವರ ಗೆಲುವಿಗೆ ಶ್ರಮಿಸುತ್ತೇನೆ. ನನ್ನ ಮಗ ಸುನೀಲ್ ಬೋಸ್ ಅವರ ಹೆಸರು 3-4 ಬಾರಿ ಪ್ರಸ್ತಾಪವಾಗಿದೆ. ಆತನ ಸ್ಪರ್ಧೆ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ಶಾಸಕರು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ” ಎಂದು ಅವರು ಹೇಳಿದ್ದಾರೆ.

ಮೂಲಗಳ ಪ್ರಕಾರ, ಮಹದೇವಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಷರತ್ತಿನ ಮೇಲೆ ಅವರನ್ನು ಸಚಿವರನ್ನಾಗಿ ಮಾಡಿತ್ತು. ಸಿದ್ದರಾಮಯ್ಯ ಸಮ್ಮುಖದಲ್ಲೇ ಷರತ್ತು ವಿಧಿಸಲಾಗಿತ್ತು. ಆದರೆ, ಈಗ ಅವರು ಸ್ಪರ್ಧೆಗೆ ಹಿಂದೆ ಸರಿದಿದ್ದಾರೆ.

ದಾವಣಗೆರೆ ಕ್ಷೇತ್ರಕ್ಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಹೆಸರನ್ನು ಹೈಕಮಾಂಡ್ ಪ್ರಸ್ತಾಪಿಸಿದೆ. ಆದರೆ, ಅವರು ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಕಣಕ್ಕಿಳಿಸುವುದಾಗಿ ಸೂಚನೆ ನೀಡಿದ್ದಾರೆ. ಆದರೆ, ಈಗ ಆ ಕ್ಷೇತ್ರಕ್ಕೆ ಹೊಸಬರನ್ನು ಕಣಕ್ಕಿಳಿಸಲು ಹೈಕಮಾಂಡ್ ಯೋಜಿಸಿದೆ. ಕುರುಬ ಸಮುದಾಯದ ಬಿ.ಜಿ ವಿನಯ್ ಕುಮಾರ್ ಅವರು ಟಿಕೆಟ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ರಾಯಚೂರಿನಲ್ಲಿ ಸೇವೆ ಸಲ್ಲಿಸಿದ್ದ ಐಎಎಸ್‌ ಅಧಿಕಾರಿ ಜಿ ಕುಮಾರ್‌ ನಾಯ್ಕ್‌ ಅವರನ್ನು ರಾಯಚೂರಿನಲ್ಲಿಯೇ ಕಣಕ್ಕಿಳಿಸುವ ಸಾಧ್ಯತೆಗಳಿವೆ. ಕೋಲಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ಕೋಲಾರದಲ್ಲಿ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ. ಆದರೆ, ಕೂಡ ಪಕ್ಷದೊಳಗೇ ವಿರೋಧಗಳಿದ್ದು, ಅವರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ, ಕೋಲಾರದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ ನಾರಾಯಣಸ್ವಾಮಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಇನ್ನು, ಸಚಿವರಾದ ಸತೀಶ್ ಜಾರಕಿಹೊಳಿ, ಬಿ ನಾಗೇಂದ್ರ ಮತ್ತು ಈಶ್ವರ ಖಂಡ್ರೆ ಅವರು ಕ್ರಮವಾಗಿ ಬೆಳಗಾವಿ, ಬಳ್ಳಾರಿ ಹಾಗೂ ಬೀದರ್ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿತ್ರದುರ್ಗಕ್ಕೆ ಮಾಜಿ ಸಚಿವ ಹೆಚ್ ಆಂಜನೇಯ ಹೆಸರು ಪ್ರಸ್ತಾಪವಾಗಿದೆ. ಅದರೆ, ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್ ಚಂದ್ರಪ್ಪ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ.

ಸತೀಶ್ ಜಾರಕಿಹೊಳಿ, ಮಹದೇವಪ್ಪ ಸೇರಿದಂತೆ ಕೆಲವು ಸಚಿವರು ರಾಷ್ಟ್ರ ರಾಜಕಾರಣಕ್ಕೆ ಬದಲಾಗಲು ಸಿದ್ಧರಿಲ್ಲ. ಅವರು ರಾಜ್ಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಲು ಬಯಸುತ್ತಿದ್ದಾರೆ.

ನಾವು ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಲು ಕಾತರದಿಂದ ಕಾಯುತ್ತಿದ್ದೇವೆ. ಅಭ್ಯರ್ಥಿ ಪಟ್ಟಿ ಬಿಡುಗಡೆ ಬಳಿಕ ನಾವು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಸ್ಥಾನ ಗೆದ್ದರೆ, ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿ ತಲಾ ಒಂದು ಸ್ಥಾನ ಗಳಿಸಿದ್ದರು.

ಆದರೆ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ 66 ಮತ್ತು ಜೆಡಿಎಸ್‌ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com