ಲಕ್ಷ್ಮಣ ಸವದಿ ಕಾಂಗ್ರೆಸ್‌ ಪರವಾಗಿದ್ದು, ಪಕ್ಷ ಬಿಡುವುದಿಲ್ಲ: ಸಚಿವ ಸತೀಶ ಜಾರಕಿಹೊಳಿ

ಶಾಸಕರಾದ ಲಕ್ಷ್ಮಣ ಸವದಿ ಕಾಂಗ್ರೆಸ್‌ ಪರವಾಗಿದ್ದು, ಅವರು ಕಾಂಗ್ರೆಸ್‌ ಬಿಡುವುದಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಸೋಮವಾರ ಹೇಳಿದರು.
ಸಚಿವ ಸತೀಶ ಜಾರಕಿಹೊಳಿ
ಸಚಿವ ಸತೀಶ ಜಾರಕಿಹೊಳಿ
Updated on

ಬೆಳಗಾವಿ: ಶಾಸಕರಾದ ಲಕ್ಷ್ಮಣ ಸವದಿ ಕಾಂಗ್ರೆಸ್‌ ಪರವಾಗಿದ್ದು, ಅವರು ಕಾಂಗ್ರೆಸ್‌ ಬಿಡುವುದಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮತನಾಡಿದ ಅವರು, ‘ಸವದಿ ಬಿಜೆಪಿ ಸೇರುತ್ತಾರೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

‘ಜಗದೀಶ ಶೆಟ್ಟರ್ ಅವರ ಕೇಸ್‌ ಬೇರೆ. ಸವದಿ ಕೇಸ್‌ ಬೇರೆ. ಒಂದು ಕೇಸ್‌ ಅನ್ನು ಇನ್ನೊಂದಕ್ಕೆ ಹೋಲಿಸಲಾಗದು. ಎಲ್ಲ ಕೇಸ್‌ ಬೇರೆ ಬೇರೆ ಇರುತ್ತವೆ. ಒಬ್ಬ ಡಾಕ್ಟರ್ ಬಳಿ ಒಬ್ಬೊಬ್ಬರದ್ದು ಬೇರೆ ಬೇರೆ ಕೇಸ್ ಪೇಪರ್ ಇರುತ್ತವೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇದೇ ವೇಳೆ ಸವದಿ ಅವರಿಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೂ ಸಮಯವಿದೆ. ಒಳ್ಳೆಯವರಿಗೆ ಅವಕಾಶವಿದೆ. ಅವರಿಗೂ ಸಾಮರ್ಥ್ಯವಿದೆ. ಉತ್ತಮ ಕೆಲಸ ಮಾಡಿದ್ದಾರೆ. ಸಚಿವ ಸ್ಥಾನ ಸಿಗುವ ಅವಕಾಶಗಳು ಮುಂದಿನ ದಿನಗಳಲ್ಲಿವೆ. ಇಲ್ಲ ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿದರು.

ಬೆಳಗಾವಿ ಲೋಕಸಭೆ ಕ್ಷೇತ್ರದ ಟಿಕೆಟ್‌ಗೆ ಇಬ್ಬರ ಹೆಸರು ಕೊಟ್ಟಿದ್ದೇವೆ. ಆದರೆ, ಒಬ್ಬರ ಹೆಸರನ್ನು ಪಕ್ಷದ ಹೈಕಮಾಂಡ್ ಅಂತಿಮಗೊಳಿಸಬೇಕಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಜೊತೆಗೆ, ಇನ್ನೊಂದು ಸುತ್ತಿನ ಚರ್ಚೆ ಆಗಬೇಕಿದೆ ಎಂದು ತಿಳಿಸಿದರು.

‘ಚಿಕ್ಕೋಡಿ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ. ಪ್ರತಿ ಬಾರಿ ಒದಿಸಿಕೊಳ್ಳಲು ನಾನೇನೂ ಫುಟ್‌ಬಾಲ್‌ ಅಲ್ಲ’ ಎಂಬ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಕಾಶ್ ಹುಕ್ಕೇರಿ ಸ್ಪರ್ಧಿಸುವುದಿಲ್ಲ ಎಂದಾಗ ಸ್ಪರ್ಧಿಸುತ್ತಾರೆ. ಸ್ಪರ್ಧಿಸುತ್ತೇನೆ ಎಂದಾಗ ಸ್ಪರ್ಧಿಸಲ್ಲ. ಆ ಡಿ–ಕೋಡ್ ನಮಗೆ ಗೊತ್ತಿದೆ. ಅವರು ಏನು ಹೇಳುತ್ತಾರೆಯೋ, ಅದರ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com