ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ವಿಚಾರದಲ್ಲಿ ನಾನು ಹೇಳಿದ್ದು ಸುಳ್ಳಾದರೆ ರಾಜಕೀಯವನ್ನೇ ತೊರೆಯುತ್ತೇನೆ: ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ವಿಚಾರದಲ್ಲಿ ನಾನು ಹೇಳಿದ್ದು ಸುಳ್ಳಾದರೆ ರಾಜಕೀಯವನ್ನೇ ತೊರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ದಾವಣಗೆರೆ: ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ವಿಚಾರದಲ್ಲಿ ನಾನು ಹೇಳಿದ್ದು ಸುಳ್ಳಾದರೆ ರಾಜಕೀಯವನ್ನೇ ತೊರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ದಾವಣಗೆರೆಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ವರ್ಷ ಹಿಂದೆಂದೂ ಕಂಡಿರದ ಬರಗಾಲ ಬಂದು ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಬರ ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿ 5 ತಿಂಗಳಾಯಿತು, ಈವರೆಗೂ ಒಂದು ರೂಪಾಯಿ ಕೂಡ ಕೊಟ್ಟಿಲ್ಲ ಎಂದು ಆರೋಪಿಸಿದರು.

ಕರ್ನಾಟಕದ ಬಿಜೆಪಿ ನಾಯಕರು ಯಾರೂ ಕೂಡ ಅಮಿತ್ ಶಾ, ನರೇಂದ್ರ ಮೋದಿ ಜೊತೆ ಮಾತನಾಡಿ ರಾಜ್ಯಕ್ಕೆ ಬರ ಪರಿಹಾರಕ್ಕೆ ಹಣ ತಂದಿಲ್ಲ, ಇವರೆಲ್ಲ ಸುಮ್ಮನೆ ಭಾಷಣ ಮಾಡುತ್ತಾರೆ, ಕಾಂಗ್ರೆಸ್ ಸರ್ಕಾರವನ್ನು ದೂರುತ್ತಾರೆ. ನಮಗೆ ಅನ್ಯಾಯ ಆದರೆ ಪ್ರತಿಭಟನೆ ಮಾಡಬಾರದೆ, ಯಡಿಯೂರಪ್ಪ ಬಾಯಿಮುಚ್ಚಿಕೊಂಡು ಕೂತಿರುತ್ತಾರೆ ಎಂದರೆ ನಾವು ಕೂಡ ಬಾಯಿ ಮುಚ್ಚಿಕೊಂಡಿರಬೇಕಾ ಎಂದು ಪ್ರಶ್ನಿಸಿದರು.

ನಮಗೆ ಅನ್ಯಾಯವಾಗಿದೆ,  ಕರ್ನಾಟಕದಲ್ಲಿ ಸಂಗ್ರಹವಾದ ತೆರಿಗೆಯಲ್ಲಿ 100 ರೂಪಾಯಿ ತೆರಿಗೆ ಕೊಟ್ಟರೆ ನಮಗೆ ಸಿಗುವುದು 12ರಿಂದ 13 ರೂಪಾಯಿ. ಇದನ್ನು ಒಪ್ಪಿಕೊಂಡು ಸುಮ್ಮನಿರಬೇಕಾ? ನಮ್ಮ ಪಾಲಿನ ಹಣ ಕೊಡದಿದ್ದರೆ ಪ್ರತಿಭಟಿಸುವುದು ನಮ್ಮ ಹಕ್ಕಲ್ಲವೇ, ತೆರಿಗೆ ಸಂಗ್ರಹ ವಿಚಾರದಲ್ಲಿ ನಾನು ಹೇಳುವುದು ಸುಳ್ಳು ಎಂದಾದರೆ ರಾಜಕೀಯವನ್ನೇ ತೊರೆಯುತ್ತೇನೆ ಎಂದು ಗುಡುಗಿದರು.

ಈ ವರ್ಷ ಕರ್ನಾಟಕದಿಂದ 4 ಲಕ್ಷದ 30 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದೆ, ನಮಗೆ ಬರುತ್ತಿರುವುದು 50 ಸಾವಿರದ 257 ಕೋಟಿ ರೂಪಾಯಿ ಮಾತ್ರ ನಮಗೆ ಬರುತ್ತಿದೆ. ಉಳಿದ ಹಣವನ್ನು ಕೇಂದ್ರ ಸರ್ಕಾರವೇ ಇಟ್ಟುಕೊಳ್ಳುತ್ತಿದೆ. ಯಡಿಯೂರಪ್ಪನವರು ಬಾಯಿ ಮುಚ್ಚಿಕೊಂಡಿದ್ದಾರೆ, ಅವರು ಕೇಂದ್ರ ನಾಯಕರ ಮುಂದೆ ತಲೆ ಅಲ್ಲಾಡಿಸಿಕೊಂಡು ಕೂತಿರುತ್ತಾರೆ ಎಂದರೆ ನಾವು ಕೂಡ ಹಾಗೆಯೇ ಮಾಡಬೇಕಾ ಎಂದು ಸಿದ್ದರಾಮಯ್ಯ ಕೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com