ಎರಡೂವರೆ ವರ್ಷದ ನಂತರ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದ ಡಿಕೆ ಸುರೇಶ್; ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ಹೀಗಿದೆ

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ 2.5 ವರ್ಷಗಳ ಅಧಿಕಾರ ಹಂಚಿಕೆಯ ವಿಚಾರವೂ ಸದ್ದು ಮಾಡುತ್ತಿದೆ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಡಿಕೆ ಸುರೇಶ್ - ಪ್ರಿಯಾಂಕ್ ಖರ್ಗೆ
ಡಿಕೆ ಸುರೇಶ್ - ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ 2.5 ವರ್ಷಗಳ ಅಧಿಕಾರ ಹಂಚಿಕೆಯ ವಿಚಾರವೂ ಸದ್ದು ಮಾಡುತ್ತಿದೆ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಅಧಿಕಾರ ಹಂಚಿಕೆಯ ಕುರಿತು ನಾಲ್ವರ ನಡುವೆ ಚರ್ಚೆ ನಡೆದಿದ್ದು, ಏನೇ ಆಗಲಿ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಅವರ ಹೇಳಿಕೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ನನ್ನನ್ನು ಸೇರಿದಂತೆ ಇತರರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ವಿಷಯದ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರವಿಲ್ಲ. ಇದು ಹೈಕಮಾಂಡ್‌ನ ನಿರ್ಧಾರವಾಗಿರುತ್ತದೆ ಎಂದರು.

'ಸದ್ಯಕ್ಕೆ ನಮ್ಮ ಸಿಎಂ ಸಿದ್ದರಾಮಯ್ಯ. ಡಿಸಿಎಂ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗಿದ್ದಾರೆ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಮುಂಬರುವ ಚುನಾವಣೆಯನ್ನೂ ಎದುರಿಸುತ್ತೇವೆ. ಕಾಂಗ್ರೆಸ್ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ಹೇಳಿದರು.

ಡಿಕೆ ಸುರೇಶ್ - ಪ್ರಿಯಾಂಕ್ ಖರ್ಗೆ
ಎರಡೂವರೆ ವರ್ಷದ ನಂತರ ಡಿಕೆಶಿ ಸಿಎಂ: ಪಕ್ಷದಲ್ಲಿ ತೀವ್ರ ಸಂಚಲನ ಮೂಡಿಸಿದ 'ಕೈ' ಶಾಸಕನ ಹೇಳಿಕೆ!

ಎರಡೂವರೆ ವರ್ಷಗಳ ನಂತರ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುತ್ತೀರಾ, ಆ ನಿರ್ಧಾರವನ್ನು ಸ್ವಾಗತಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿನಾಕಾರಣ ಏನನ್ನೋ ಏಕೆ ಕಲ್ಪಿಸಿಕೊಳ್ಳುತ್ತೀರಿ? ಈಗ ಬಜೆಟ್ ಮುಖ್ಯ. ಬಜೆಟ್ ಬಗ್ಗೆ ಉತ್ತಮ ಚರ್ಚೆಯಾಗಲಿ. ಮೊದಲು ಲೋಕಸಭೆ ಚುನಾವಣೆ ಎದುರಿಸಿ 20 ಸೀಟು ಗೆಲ್ಲೋಣ ಆಮೇಲೆ ನೋಡೋಣ ಎಂದರು.

ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ತಮ್ಮ ಸಹೋದರ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಎರಡೂವರೆ ವರ್ಷಗಳ ಅಧಿಕಾರವಧಿ ನಂತರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬುಧವಾರ ತಿಳಿಸಿದ್ದರು.

ಶಿವಕುಮಾರ್ ಅವರು ಸಿಎಂ ಆಗುವ ಆಕಾಂಕ್ಷೆ ಈಡೇರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಕನಸು ಕಾಣುವುದು ತಪ್ಪಲ್ಲ, ನೀವು ಹೇಳುವುದನ್ನು ಸುಳ್ಳೆಂದು ನಾನು ಹೇಳುವುದಿಲ್ಲ. ಕನಸುಗಳು ನನಸಾಗಲು ಸಮಯ ಬೇಕು. ಬದಲಾವಣೆಗಳು ಅನಿವಾರ್ಯ ಮತ್ತು ನಾವು ತಾಳ್ಮೆಯಿಂದಿರಬೇಕು. ಶಿವಕುಮಾರ್ ಅವರ ಕನಸು ನನಸಾಗುವ ದಿನ ಬರುತ್ತದೆ. ಅವರು ಎರಡೂವರೆ ವರ್ಷಗಳ ನಂತರ ಸಿಎಂ ಆಗುತ್ತಾರೆ. ಆದರೆ, ಸಮಯ ಬರುವವರೆಗೆ ಕಾಯಬೇಕು ಎಂದು ಸುರೇಶ್ ಹೇಳಿದರು.

ಡಿಕೆ ಸುರೇಶ್ - ಪ್ರಿಯಾಂಕ್ ಖರ್ಗೆ
ಮೂವರು ಉಪ ಮುಖ್ಯಮಂತ್ರಿ ಬೇಡಿಕೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ: ಡಿ ಕೆ ಶಿವಕುಮಾರ್

ಎರಡೂವರೆ ವರ್ಷಗಳ ಅವಧಿಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್, 'ಈ ವಿಷಯದ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ. ನಾನು ಈಗ ಏನನ್ನೂ ಬಹಿರಂಗಪಡಿಸುವುದಿಲ್ಲ. ಆದರೆ, ಶಿವಕುಮಾರ್ ಅವರ ಕನಸು ನನಸಾಗುವ ಸಮಯ ಬರುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com