ಡಿಕೆಶಿ ನಿವಾಸದಲ್ಲಿ ಔತಣಕೂಟ; ಜಾರಕಿಹೊಳಿ, ಮಹದೇವಪ್ಪ ಸೇರಿ ಹಲವರು ಗೈರು; ಪರೋಕ್ಷವಾಗಿ ಅಸಮಾಧಾನ?

ರಾಜ್ಯಸಭೆ ಜೊತೆ ಲೋಕಸಭಾ ಚುನಾವಣೆಗೆ ಸಿದ್ಧತೆ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಶುಕ್ರವಾರ ರಾತ್ರಿ ಕರೆದಿದ್ದ ಔತಣಕೂಟದಲ್ಲಿ ಸತೀಶ್ ಜಾರಕಿಹೊಳಿ, ಮಹದೇವಪ್ಪ ಸೇರಿ ಹಲವರು ಗೈರು ಹಾಜರಾಗಿದ್ದು...
ಡಿಕೆಶಿ, ಎಂಬಿ ಪಾಟೀಲ್ ಮತ್ತು ಸಿದ್ದರಾಮಯ್ಯ
ಡಿಕೆಶಿ, ಎಂಬಿ ಪಾಟೀಲ್ ಮತ್ತು ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಸಭೆ ಜೊತೆ ಲೋಕಸಭಾ ಚುನಾವಣೆಗೆ ಸಿದ್ಧತೆ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಶುಕ್ರವಾರ ರಾತ್ರಿ ಕರೆದಿದ್ದ ಔತಣಕೂಟದಲ್ಲಿ ಸತೀಶ್ ಜಾರಕಿಹೊಳಿ, ಮಹದೇವಪ್ಪ ಸೇರಿ ಹಲವರು ಗೈರು ಹಾಜರಾಗಿದ್ದು, ಈ ಬೆಳವಣಿಗೆ ಹಲವರ ಹುಬ್ಬೇರುವಂತೆ ಮಾಡಿದೆ. ಔತಣಕೂಟಕ್ಕೆ ಗೈರು ಹಾಜರಾಗುವ ಮೂಲಕ ನಾಯಕರು ಡಿಕೆಶಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಡಿಕೆ.ಶಿವಕುಮಾರ್ ಅವರು ಶುಕ್ರವಾರ ರಾತ್ರಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಸಂಸದ ಡಿ.ಕೆ ಸುರೇಶ್ ಮನೆಯಲ್ಲಿ ಈ ಔತಣ ಕೂಟ ನಡೆಸಿದ್ದರು. ಆದರೆ, ಈ ಔತಣಕೂಟಕ್ಕೆ ಕೆಲವು ಪ್ರಮುಖ ಸಚಿವರೇ ಗೈರಾಗಿದ್ದರು. 9ಕ್ಕೂ ಹೆಚ್ಚು ಸಚಿವರು ಡಿಕೆ ಶಿವಕುಮಾರ್ ಔತಣಕೂಟದಿಂದ ಗೈರಾಗಿದ್ದರು. ಸಚಿವರಾದ ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಎಸ್‌.ಎಸ್‌.ಮಲ್ಲಿಕಾರ್ಜುನ ಗೈರಾಗಿದ್ದರು.

ಉಳಿದಂತೆ ಸಚಿವರಾದ ಸಂತೋಷ್‌ ಲಾಡ್‌‌, ಶರಣಬಸಪ್ಪ ದರ್ಶನಾಪುರ, ರಹೀಂಖಾನ್‌, ಕೃಷ್ಣ ಬೈರೇಗೌಡ, ಬೈರತಿ ಸುರೇಶ್ ಕೂಡ ಈ ಔತಣಕೂಟದಿಂದ ಗೈರಾಗಿದ್ದರು. ಈ ಮೂಲಕ ಡಿಕೆಶಿ ವಿರುದ್ಧ ಈ ಸಚಿವರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಹಿರಿಯ ಸಚಿವರು ಲೋಕಸಭೆಗೆ ಸ್ಪರ್ಧಿಸಬೇಕು ಎಂದು ಡಿಕೆ ಶಿವಕುಮಾರ್ ಒತ್ತಡ ಹೇರುತ್ತಿದ್ದು. ಇದಕ್ಕೆ ಸತೀಶ್, ರಾಜಣ್ಣ, ಮಹದೇವಪ್ಪ ಸೇರಿದಂತೆ ಹಲವರು ಬಹಿರಂಗಾವಾಗಿಯೇ ಅಸಮಾಧಾನ ಹೊರಹಾಕಿದ್ದರು. ಇದೀಗ ಔತಣಕೂಟಕ್ಕೂ ಗೈರು ಹಾಜರಾಗುವ ಮೂಲಕ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.

ಇವರನ್ನು ಹೊರತುಪಡಿಸಿದರೆ ಪಕ್ಷದ ಬಹುತೇಕ ನಾಯಕರು ಔತಣಕೂಟದಲ್ಲಿ ಹಾಜರಾಗಿದ್ದರು. ಸಚಿವರಾದ ಚಲುವರಾಯಸ್ವಾಮಿ, ಡಾ .ಶರಣ ಪ್ರಕಾಶ್ ಪಾಟೀಲ್, ಎಂ ಸಿ ಸುಧಾಕರ್, ಜಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಕೆ ಜೆ ಜಾರ್ಜ್, ಕೆ.ವೆಂಕಟೇಶ್, ಜಿ ಪರಮೇಶ್ವರ್, ಎಂ ಬಿ ಪಾಟೀಲ್, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಆರ್ ಬಿ ತಿಮ್ಮಾಪುರ, ಬೋಸರಾಜು, ಎಚ್ ಕೆ ಪಾಟೀಲ್, ಶಿವಾನಂದ್ ಪಾಟೀಲ್, ರಾಮಲಿಂಗಾ ರೆಡ್ಡಿ, ಶಿವರಾಜ್ ತಂಗಡಗಿ, ಬಿ.ನಾಗೇಂದ್ರ, ದಿನೇಶ್ ಗುಂಡೂರಾವ್, ಡಿ ಸುಧಾಕರ್ ಹಾಗೂ ಮಂಕಾಳ್ ವೈದ್ಯ ಭಾಗಿಯಾಗಿದ್ದರು.

ಮಾಜಿ ಕೇಂದ್ರ ಸಚಿವ ದಿಗ್ವಿಜಯ ಸಿಂಗ್ ಮತ್ತು ಕಾಂಗ್ರೆಸ್‌ನ ಆರ್‌ಎಸ್‌ಎಸ್ ಅಭ್ಯರ್ಥಿ ಅಜಯ್ ಮಾಕನ್ ಕೂಡ ಔತಣಕೂಟದಲ್ಲಿ ಭಾಗವಹಿಸಿದ್ದರು.

ಡಿಕೆಶಿ, ಎಂಬಿ ಪಾಟೀಲ್ ಮತ್ತು ಸಿದ್ದರಾಮಯ್ಯ
ಲೋಕಸಭೆ ಚುನಾವಣೆ: ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಮತ್ತೊಂದು ಸಮೀಕ್ಷೆ ಮಾಡುತ್ತೇವೆ; ಡಿಕೆ.ಶಿವಕುಮಾರ್

ಪೂರ್ವನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಾಯಕರು ಗೈರು ಹಾಜರಾಗಿದ್ದರು ಎಂದು ಡಿಕೆ.ಶಿವಕುಮಾರ್ ಬೆಂಬಲಿಗರು ಹೇಳಿದ್ದಾರೆ.

ಔತಣಕೂದಲ್ಲಿ ರಾಜ್ಯಸಭೆ ಮತ್ತು ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಸಮಾಲೋಚನೆ ನಡೆಸಲಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಪಕ್ಷ 20 ಸ್ಥಾನ ಗೆಲುವಿಗೆ ಶ್ರಮಿಸುತ್ತಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಡಿಸಿಎಂ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಪರಿಷತ್ ಸದಸ್ಯರ ಗೈರು ಹಾಜರಿ ಬಗ್ಗೆ ಡಿಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರವಾಗಿ ಘೋಷಿಸಬೇಕಾದ ಅಗತ್ಯತೆ ಕುರಿತ ಚರ್ಚೆ ನಡೆಸಲಾಯಿತು. ಸ್ಕ್ರೀನಿಂಗ್ ಕಮಿಟಿಯು ಅಭ್ಯರ್ಥಿಗಳ ಆಯ್ಕೆ ಪಟ್ಟಿ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಮತ್ತೊಂದು ಸಭೆ ನಡೆಸಿದ ನಂತರ ಅಂತಿಮ ಪಟ್ಟಿಯು ಕೇಂದ್ರ ಚುನಾವಣಾ ಸಮಿತಿಗೆ (ಸಿಇಸಿ) ತಲುಪಲಿದೆ. ಲೋಕಸಭೆ ಚುನಾವಣೆಯಲ್ಲಿ ಸಚಿವರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸುವ ಕುರಿತು ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com