ರಾಜ್ಯದಲ್ಲಿ ಯಾವಾಗ ಬೇಕಾದರೂ ವಿಧಾನಸಭೆ ಚುನಾವಣೆ ನಡೆಯಬಹುದು: ಬಿವೈ ವಿಜಯೇಂದ್ರ

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರ ಉರುಳಿದ್ದನ್ನು ಉಲ್ಲೇಖಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ರಾಜ್ಯದಲ್ಲೂ ಯಾವಾಗ ಬೇಕಾದರೂ ವಿಧಾನಸಭೆ ಚುನಾವಣೆ ನಡೆಯಬಹುದು...
ಬಿ.ವೈ ವಿಜಯೇಂದ್ರ
ಬಿ.ವೈ ವಿಜಯೇಂದ್ರ

ಚಾಮರಾಜನಗರ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರ ಉರುಳಿದ್ದನ್ನು ಉಲ್ಲೇಖಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ರಾಜ್ಯದಲ್ಲೂ ಯಾವಾಗ ಬೇಕಾದರೂ ವಿಧಾನಸಭೆ ಚುನಾವಣೆ ನಡೆಯಬಹುದು ಎಂದು ಶನಿವಾರ ಹೇಳಿದ್ದಾರೆ.

ಇಂದು ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಜಯೇಂದ್ರ, ರಾಜ್ಯದಲ್ಲಿ ಯಾವಾಗ ಬೇಕಾದರೂ ವಿಧಾನಸಭೆ ಚುನಾವಣೆ ಬರಬಹುದು. ನೀವು ಕಾರ್ಯಕರ್ತರ ಆಶೀರ್ವಾದ ಮಾಡಬೇಕು. 130ರಿಂದ 140 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಬೇಕು ಮತ್ತು ಚಾಮರಾಜನಗರ ಜಿಲ್ಲೆಯ ನಾಲ್ಕೂ ಸ್ಥಾನಗಳಲ್ಲಿ ನಮ್ಮ ಪಕ್ಷ ಗೆಲ್ಲಲೇಬೇಕು ಎಂದು ಹೇಳಿದರು.

ಆಂತರಿಕ ಗೊಂದಲಗಳಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ಆದರೆ, ನಮ್ಮ ಕೆಲವು ನಾಯಕರು ಚುನಾವಣೆಯ ನಂತರ ಮಾತನಾಡಲು ಪ್ರಾರಂಭಿಸುತ್ತಾರೆ. ಬೇಡಿಕೆಗಳನ್ನು ಇಡುತ್ತಾರೆ ಮತ್ತು ಪಕ್ಷ ಅಧಿಕಾರಕ್ಕೆ ತಾವೇ ಕಾರಣ ಎಂದು ಓಡಾಡುತ್ತಾರೆ ಎಂದು ಪಕ್ಷದ ಹಿರಿಯ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು.

ಬಿಜೆಪಿ ಮೂರು ರಾಜ್ಯಗಳನ್ನು ಹೇಗೆ ಗೆದ್ದಿದೆ ಎಂಬುದನ್ನು ನಾವು ನೋಡಿದ್ದೇವೆ. ಕರ್ನಾಟಕದಲ್ಲಿ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ. ಬಿಜೆಪಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ ಎಂದರು.

ಚಾಮರಾಜನಗರದ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರು. ಆದರೂ ಕಳೆದ ಏಳು ತಿಂಗಳಿಂದ ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ತರಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.

ಈ ಹಿಂದೆ, ಕರ್ನಾಟಕದಲ್ಲಿ ಯಾವ ಕ್ಷಣದಲ್ಲಾದರೂ 'ಮಹಾರಾಷ್ಟ್ರದಂತಹ' ರಾಜಕೀಯ ಬಿಕ್ಕಟ್ಟು ಸಂಭವಿಸಬಹುದು ಎಂದು ಜೆಡಿಎಸ್ ನಾಯಕ, ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಪ್ರಚಲಿತ ರಾಜಕೀಯ ವಾತಾವರಣ ನೋಡಿದರೆ ಏನು ಬೇಕಾದರೂ ಆಗಬಹುದು’ ಎಂದು ವಿಜಯೇಂದ್ರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com