ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: ರೈತರಿಗೆ ಪರಿಹಾರ ಕೊಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಮನವಿ

ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಕೊಡುವಂತೆ ಸರ್ಕಾರಕ್ಕೆ  ನಿರ್ದೇಶನ ನೀಡುವಂತೆ ವಿಪಕ್ಷ ನಾಯಕ ಆರ್‌. ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಿಯೋಗ
ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಿಯೋಗ
Updated on

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಕೊಡುವಂತೆ ಸರ್ಕಾರಕ್ಕೆ  ನಿರ್ದೇಶನ ನೀಡುವಂತೆ ವಿಪಕ್ಷ ನಾಯಕ ಆರ್‌. ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

 ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ, ಮಾಜಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ, ಮಾಜಿ ಸಚಿವ ಕೆ. ಗೋಪಾಲಯ್ಯ, ಶಾಸಕಾರದ ಎಸ್ ರಘು, ರವಿ ಸುಬ್ರಮಣ್ಯ, ಕೆ. ರಾಮಮೂರ್ತಿ ಹಾಜರಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಒಂದು, ಎರಡು ತಿಂಗಳಲ್ಲಿ ರೈತರಿಗೆ ಪ್ರವಾಹ ಹಾನಿ ಪರಿಹಾರ ವಿತರಿಸಿತ್ತು. ಈಗಿನ ಕಾಂಗ್ರೆಸ್‌ ಸರ್ಕಾರ ಕೂಡಲೇ ಪರಿಹಾರ ವಿತರಿಸಲಿ, ಇಲ್ಲವಾದರೆ ಎಲ್ಲರೂ ರಾಜೀನಾಮೆ ನೀಡಲಿ ಎಂದು ಸವಾಲೆಸೆದರು.

ರಾಜ್ಯಪಾಲರನ್ನು ಭೇಟಿ ಮಾಡಿ ಕಾಂಗ್ರೆಸ್‌ ಸರ್ಕಾರದ ಬೇಜವಾಬ್ದಾರಿತನದ ಬಗ್ಗೆ ತಿಳಿಸಿದ್ದೇವೆ. ಸುಮಾರು 600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಕಡೆಗೆ ಸರ್ಕಾರ ತಿರುಗಿಯೂ ನೋಡುತ್ತಿಲ್ಲ. ಅಧಿಕಾರಿಗಳು ಸಾಂತ್ವನ ಹೇಳಿಲ್ಲ, ಸಚಿವರು ಕೂಡ ರೈತರ ಬಳಿ ಹೋಗಿಲ್ಲ. ಉತ್ತರ ಕರ್ನಾಟಕದಲ್ಲಿ ವಲಸೆ ಆರಂಭವಾಗಿದೆ. ಬರಗಾಲ ಶುರುವಾಗಿ ಐದು ತಿಂಗಳಾದರೂ ಸರ್ಕಾರ ನಯಾ ಪೈಸೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

ಎರಡು ಸಾವಿರ ರೂಪಾಯಿ ಪರಿಹಾರ ನೀಡುವ ಬಗ್ಗೆ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಇದುವರೆಗೆ ರೈತರಿಗೆ ಹಣ ತಲುಪಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರದ ಲಾಲಸೆಯಿಂದಾಗಿ ರೈತರನ್ನು ಅನಾಥರನ್ನಾಗಿಸಿದೆ. ಏನೇ ಕೇಳಿದರೂ ಕೇಂದ್ರ ಸರ್ಕಾರ ನೆರವಿಗೆ ಬರುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. 

ಬಿಜೆಪಿ ಅವಧಿಯಲ್ಲಿ ಮೊದಲ ಬಾರಿಗೆ ಡಿಬಿಟಿ ಮುಖಾಂತರ ರೈತರಿಗೆ 3 ಸಾವಿರ ಕೋಟಿ ರೂ.ಗೂ ಅಧಿಕ ಪರಿಹಾರ ನೀಡಲಾಗಿತ್ತು. ಈಗಿನ ಸರ್ಕಾರ ಕೇವಲ 100 ಕೋಟಿ ರೂ. ಪರಿಹಾರ ನೀಡಲಿಕ್ಕೂ ಮೀನಾ ಮೇಷ ಎಣಿಸುತ್ತಿದೆ. ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದೆ, ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದೆ. ಬರಗಾಲ ಬರಲು ರೈತರು ಕಾಯುತ್ತಿದ್ದಾರೆ ಎಂದು ಸಚಿವರೇ ಹೇಳುತ್ತಾರೆ ಎಂದು ದೂರಿದರು. 

ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡದೆ ಬೊಗಳೆ ಬಿಡುತ್ತಿದೆ. ಹಿಂದಿನ ನಮ್ಮ ಬಿಜೆಪಿ ಸರಕಾರ ಒಂದು, ಎರಡು ತಿಂಗಳಲ್ಲಿ ಪರಿಹಾರ ನೀಡಿರುವಾಗ ಈಗಿನ ಸರ್ಕಾರ ಕೂಡ ಅದೇ ರೀತಿ ಪರಿಹಾರ ಕೊಡಲಿ, ಇಲ್ಲವಾದರೆ ರಾಜೀನಾಮೆ ನೀಡಲಿ. ಮುಸಲ್ಮಾನರಿಗೆ 1 ಸಾವಿರ ಕೋಟಿ ರೂ. ನೀಡುವವರು ರೈತರಿಗೆ ಕೇವಲ 100 ಕೋಟಿ ರೂ. ನೀಡುತ್ತಾರೆ. ಈ ರೀತಿ ಮಾಡಿದರೆ ರೈತರ ಶಾಪ ತಟ್ಟಲಿದೆ ಎಂದು ಆಕ್ರೋಶ ಹೊರಹಾಕಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com