ನಿಗಮ-ಮಂಡಳಿ ನೇಮಕ: ನಾವೇನು ಗುಲಾಮರಾ?; ಹೈಕಮಾಂಡ್ ವಿರುದ್ಧ ಸಚಿವ ರಾಜಣ್ಣ ಕಿಡಿ

ನಿಗಮ, ಮಂಡಳಿ ನೇಮಕ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಚಿವ ರಾಜಣ್ಣ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸಚಿವ ರಾಜಣ್ಣ
ಸಚಿವ ರಾಜಣ್ಣ

ತುಮಕೂರು: ನಿಗಮ, ಮಂಡಳಿ ನೇಮಕ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಚಿವ ರಾಜಣ್ಣ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಹೈ ಕಮಾಂಡ್ ಗುಲಾಮರಾ? ಈ ರೀತಿ ಸವಾರಿ ಮಾಡುವುದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ನಮ್ಮ ಜತೆ ಮಾತುಕತೆ ನಡೆಸಿ, ವಿಶ್ವಾಸಕ್ಕೆ ತೆಗೆದುಕೊಂಡು ನಿಗಮ, ಮಂಡಳಿಗೆ ನೇಮಕ ಮಾಡಬೇಕಾ? ಇಲ್ಲ, ದೆಹಲಿಯಲ್ಲಿ ಕುಳಿತು ಪಟ್ಟಿ ಮಾಡಿ ಲಾಟರಿ ಟಿಕೆಟ್ ಹಂಚಿದಂತೆ ಹಂಚಿದರೆ ಹೇಗೆ? ನಮ್ಮನ್ನು ಒಂದು ಮಾತು ಕೇಳಬೇಕಲ್ಲ?’ ಎಂದು ತರಾಟೆಗೆ ತೆಗೆದುಕೊಂಡರು.

‘ಸ್ಥಳೀಯವಾಗಿ ಯಾವ ಕಾರ್ಯಕರ್ತರು, ಮುಖಂಡರು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿರುತ್ತದೆ. ನಾವು ಕೊಟ್ಟ ಹೆಸರುಗಳನ್ನು ಸೇರಿಸಬೇಕು. ಅದು ಬಿಟ್ಟು, ದೆಹಲಿಯಲ್ಲಿ ಕುಳಿತು ತಮಗೆ ಬೇಕಾದವರ ಹೆಸರುಗಳನ್ನು ಸೇರಿಸುವುದನ್ನು ಸಹಿಸುವುದಿಲ್ಲ. ಹಿಂದೆ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಿಗೆ ಜವಾಬ್ದಾರಿ ಕೊಟ್ಟು, ಸಲಹೆ ನೀಡುತ್ತಿದ್ದರು. ಈಗ ಅವರೇ ಪಟ್ಟಿ ಸಿದ್ಧಪಡಿಸಿ ಕಳುಹಿಸಿದ್ದಾರೆ. ಇದು ಹೊಸ ಹೈಕಮಾಂಡ್‌ನ, ಹೊಸ ವರಸೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಹೇಳದೆ ಗುಡುಗಿದರು.

‘ಈ ವಿಚಾರದಲ್ಲಿ ಹೈ ಕಮಾಂಡ್‌ನ ಯಾವ ನಾಯಕರ ಹೆಸರನ್ನೂ ಹೇಳಲು ಬಯಸುವುದಿಲ್ಲ. ಆದರೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಇದೇ ರೀತಿ ನಡೆದುಕೊಂಡರೆ ಅವರೇ ಇಲ್ಲಿಗೆ ಬಂದು ಗೆಲ್ಲಿಸಬೇಕಾಗುತ್ತದೆ. ನಮ್ಮನ್ನು ಏನೂ ಕೇಳುವಂತಿಲ್ಲ. ಎಲ್ಲಾ ಅವರೇ ಮಾಡುವುದಾದರೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ’ ಎಂದು ಸವಾಲು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com