ಬಿಜೆಪಿ ಸೈಲೆಂಟ್ ಆಪರೇಷನ್ ಸಕ್ಸಸ್: ಶೆಟ್ಟರ್​​ ಬಿಜೆಪಿಗೆ ಮರಳಿದ ಬೆನ್ನಲ್ಲೇ ಲಕ್ಷ್ಮಣ ಸವದಿ ಜೊತೆ ಡಿಕೆಶಿ ಮಾತುಕತೆ!

ಸಿಟ್ಟಿನಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಈ ಮೂಲಕ ಬಿಜೆಪಿಯ ಸೈಲೆಂಟ್ ಆಪರೇಷನ್ ಯಶಸ್ವಿಯಾಗಿದೆ. ಈ ಬೆಳವಣಿಗೆ ಕೈ ಪಡೆಗೆ ಶಾಕ್ ನೀಡಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿಯಿಂದ ಬಂದಿದ್ದ ಮತ್ತೊಬ್ಬ ನಾಯಕ ಲಕ್ಷ್ಮಣ್ ಸವದಿಯವರನ್ನು...
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಅವರನ್ನು ಭೇಟಿ ಮಾಡಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಅವರನ್ನು ಭೇಟಿ ಮಾಡಿದರು.
Updated on

ಬೆಂಗಳೂರು: ಸಿಟ್ಟಿನಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಈ ಮೂಲಕ ಬಿಜೆಪಿಯ ಸೈಲೆಂಟ್ ಆಪರೇಷನ್ ಯಶಸ್ವಿಯಾಗಿದೆ. ಈ ಬೆಳವಣಿಗೆ ಕೈ ಪಡೆಗೆ ಶಾಕ್ ನೀಡಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿಯಿಂದ ಬಂದಿದ್ದ ಮತ್ತೊಬ್ಬ ನಾಯಕ ಲಕ್ಷ್ಮಣ್ ಸವದಿಯವರನ್ನು ಭೇಟಿ ಮಾಡಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಲಿಂಗಾಯತ ಸಮುದಾಯಕ್ಕೆ ಸೇರಿದ ಬಿಜೆಪಿ ನಾಯಕರಲ್ಲಿ ಸವದಿ ಕೂಡ ಒಬ್ಬರಾಗಿದ್ದರು. ಮೇ 10 ರ ವಿಧಾನಸಭಾ ಚುನಾವಣೆಗೂ ಮುನ್ನವೇ ಸವದಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಶೆಟ್ಟರ್ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ.ಶಿವಕುಮಾರ್ ಅವರು, ಶೆಟ್ಟರ್ ಅವರನ್ನು 35,000 ಮತಗಳಿಂದ ಜನರು ತಿರಸ್ಕರಿಸಿದರೂ ನಾವು (ಕಾಂಗ್ರೆಸ್) ಅವರನ್ನು ಗೌರವದಿಂದ ನೋಡಿಕೊಂಡು ಎಂಎಲ್‌ಸಿ ಮಾಡಿದ್ದೆವು. ಇಂದಿನ ಬೆಳವಣಿಗೆ ಅವರ ಆತ್ಮಸಾಕ್ಷಿ ಮತ್ತು ಜನರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

ಕ್ಷೇತ್ರದ ನಾಯಕರಿಂದ ಬಿಜೆಪಿ ಸೇರಲು ಆಫರ್ ಬರುತ್ತಿದೆ ಎಂದು ಶೆಟ್ಟರ್ ಕೆಲವು ದಿನ ಹಿಂದೆ ಹೇಳಿದ್ದರು. ಆದರೆ ಆ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದೂ ಹೇಳಿದ್ದರು. ಅವರ ಮಾತನ್ನು ನಾನು ನಂಬಿದ್ದೇನೆ, ಏಕೆಂದರೆ ಕಾಂಗ್ರೆಸ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ತಿಳಿಸಿದರು.

ಶೆಟ್ಟರ್ ಹಿರಿತನವನ್ನು ಪರಿಗಣಿಸಿ ಕಾಂಗ್ರೆಸ್ ಅವರನ್ನು ಗೌರವದಿಂದ ನಡೆಸಿಕೊಂಡಿತ್ತು. ರಾಮಮಂದಿರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಅವರನ್ನು ಬಲವಂತದಿಂದ ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದರು.

ಏತನ್ಮಧ್ಯೆ, ಲೋಕಸಭೆ ಚುನಾವಣೆಗೆ ಲಿಂಗಾಯತ ಮತಗಳ ಮೇಲೆ ಬಿಜೆಪಿ ನಾಯಕರು ದೃಷ್ಟಿ ನೆಟ್ಟಿರುವಂತೆ ತೋರುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಹೀಗಾಗಿ ಶೆಟ್ಟರ್ ಅವರನ್ನು ಮತ್ತೆ ಸೇರ್ಪಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶೆಟ್ಟರ್ ನಡೆಯನ್ನು ಪ್ರಶ್ನಿಸಿದ ಎಂಬಿ ಪಾಟೀಲ್, ಮಾಜಿ ಸಿಎಂ ತರಾತುರಿಯಲ್ಲಿ ಬಿಜೆಪಿಗೆ ಮರಳಿರುವುದು ಅವರ ಸ್ಥಾನಮಾನಕ್ಕೆ ತಕ್ಕುದಲ್ಲ. ವಿಶೇಷವಾಗಿ ಕೇಸರಿ ಪಕ್ಷವು ಅವರನ್ನು ಕೈಬಿಟ್ಟ ನಂತರ ಕಾಂಗ್ರೆಸ್ ಅವರನ್ನು ಚೆನ್ನಾಗಿ ನಡೆಸಿಕೊಂಡಿತ್ತು ಎಂದು ಹೇಳಿದ್ದಾರೆ.

ಶೆಟ್ಟರ್​ಗೆ ಕಾಂಗ್ರೆಸ್‌ನಲ್ಲಿ ಉತ್ತಮ ಭವಿಷ್ಯವಿತ್ತು. ಪಕ್ಷವು ಅವರಿಗೆ ಧಾರವಾಡ ಲೋಕಸಭಾ ಸ್ಥಾನಕ್ಕೆ ಟಿಕೆಟ್ ನೀಡಬಹುದು ಎಂಬ ಆಲೋಚನೆ ಇತ್ತು. ಬಿಜೆಪಿ ಅವರ ಮೇಲೆ ಒತ್ತಡ ಹೇರಿದೆಯೋ ಅಥವಾ ಆಮಿಷ ಒಡ್ಡಿದೆಯೋ ಗೊತ್ತಿಲ್ಲ ಎಂದು ಪಾಟೀಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com