ಸುದೀರ್ಘ ಚರ್ಚೆ ನಡೆಸಿ, ಎಲ್ಲರ ಅಭಿಪ್ರಾಯ ಪಡೆದೇ ನಿಗಮ-ಮಂಡಳಿಗಳಿಗೆ ನೇಮಕ ಮಾಡಲಾಗಿದೆ: ಡಿಕೆ ಶಿವಕುಮಾರ್

ಸುದೀರ್ಘ ಚರ್ಚೆ ನಡೆಸಿ, ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿದ ಬಳಿಕವೇ ನಿಗಮ‌  ಮಂಡಳಿಗಳಿಗೆ ನೇಮಕ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೇಳಿದರು.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ಸುದೀರ್ಘ ಚರ್ಚೆ ನಡೆಸಿ, ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿದ ಬಳಿಕವೇ ನಿಗಮ‌ ಮಂಡಳಿಗಳಿಗೆ ನೇಮಕ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೇಳಿದರು.

ಕುಮಾರಪಾರ್ಕ್ ಸರ್ಕಾರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನೇಮಕದ ಬಗ್ಗೆ ಸಿದ್ದರಾಮಯ್ಯ ಅವರು, ನಾನು ಹಾಗೂ ಪ್ರಧಾನ ಕಾರ್ಯದರ್ಶಿಗಳು ಕೂತು ಚರ್ಚೆ ಮಾಡಿದ್ದೇವೆ. ಎಲ್ಲರ ಅಭಿಪ್ರಾಯವನ್ನು ಪಡೆದಿದ್ದೇವೆ. ಕೆಲವರು ಇಂತಹವರಿಗೆ ಸ್ಥಾನ ನೀಡಬೇಕು ಎಂಬ ಪಟ್ಟಿ ಕೊಟ್ಟಿದ್ದಾರೆ. ಆ ಪತ್ರವನ್ನು ನಿಮ್ಮ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

‘ಮಂತ್ರಿ ಆಗಬೇಕು, ದೊಡ್ಡ ನಿಗಮ- ಮಂಡಳಿ ಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಎರಡು ವರ್ಷಗಳ‌ ಅವಧಿ ಮುಗಿದ ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂದು ಸೂಚನೆ ನೀಡಿದ್ದೇವೆ. ‘ಚುನಾವಣಾ ಸಮಯದಲ್ಲಿ ಕೆಲವರಿಗೆ ಮಾತು ನೀಡಿದಂತೆ ಹುದ್ದೆ ನೀಡಲಾಗಿದೆ. ಎಲ್ಲರನ್ನೂ ತೃಪ್ತಿಪಡಿಸಿದ್ದೇವೆಂದು ಹೇಳುವುದಿಲ್ಲ. ಪ್ರತಿ ಕ್ಷೇತ್ರದಲ್ಲಿ ಇಬ್ಬರು, ಮೂವರು ಆಕಾಂಕ್ಷಿಗಳಿದ್ದರು. ಸ್ಥಳೀಯ ಮಟ್ಟದಲ್ಲಿ ಆಸ್ಪತ್ರೆ ಸಮಿತಿ, ಬಗರ್‌ ಹುಕುಂ ಸಾಗುವಳಿ ಸಮಿತಿ, ಆಶ್ರಯ ಸಮಿತಿ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

ಕ್ರೀಡಾ ಪ್ರಾಧಿಕಾರಕ್ಕೆ ಸಚಿವರು ಅಧ್ಯಕ್ಷರಾಗಿರುತ್ತಾರೆಂದು ಈ ಹಿಂದೆಯೇ ಬೈ-ಲಾ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಬೈ–ಲಾ ಮಾಡಲಾಗಿತ್ತು. ಈಗ ಮತ್ತೆ ಪರಿಷ್ಕರಿಸಲಾಗುವುದು’ ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಪಿ.ಎಂ. ನರೇಂದ್ರ ಸ್ವಾಮಿ ನೇಮಕದ ಬಗ್ಗೆ ಕೇಳಿದಾಗ, ‘ಪ್ರಕರಣ ನ್ಯಾಯಲಯದಲ್ಲಿದೆ. ಪ್ರಕರಣ ಇತ್ಯರ್ಥವಾದ ತಕ್ಷಣ ನರೇಂದ್ರ ಸ್ವಾಮಿಗೆ ಹುದ್ದೆ ನೀಡಲಾಗುವುದು’ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com