ಲೋಕಸಭಾ ಚುನಾವಣೆಯಲ್ಲಿ ಸೋಲಿನ ಪರಾಮರ್ಶೆಗೆ ಸತ್ಯ ಶೋಧನ ಸಮಿತಿ ರಚನೆ: ಡಿಸಿಎಂ ಡಿ ಕೆ ಶಿವಕುಮಾರ್

ಕಲ್ಯಾಣ ಕರ್ನಾಟಕ ಹೊರತಾಗಿ ಮಿಕ್ಕ ಕಡೆ ಪಕ್ಷ ಸೋಲಿನ ಪರಾಮರ್ಶೆಗೆ ಸತ್ಯಶೋಧನ ಸಮಿತಿ ರಚಿಸಲಾಗುವುದು. ಈ ಸಮಿತಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಪದಾಧಿಕಾರಿಗಳ ಸಭೆ
ಕೆಪಿಸಿಸಿ ಪದಾಧಿಕಾರಿಗಳ ಸಭೆ
Updated on

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳು ಗೆಲ್ಲದೆ ಇರುವ ಕಾರಣಕ್ಕೆ ಸೋಲಿನ ಪರಾಮರ್ಶೆಗೆ ಸತ್ಯ ಶೋಧನ ಸಮಿತಿ ರಚನೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಪಕ್ಷದ ಪದಾಧಿಕಾರಿಗಳ ಸಭೆ ನಂತರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಫಲಿತಾಂಶ ಸಮಾಧಾನಕರವಾಗಿಲ್ಲ. 15 ಕ್ಕೂ ಹೆಚ್ಚು ಸ್ಥಾನ ಪಡೆಯುತ್ತೇವೆ ಎನ್ನುವ ನಿರೀಕ್ಷೆ ಸುಳ್ಳಾಗಿದೆ. ಕಲ್ಯಾಣ ಕರ್ನಾಟಕ ಹೊರತಾಗಿ ಮಿಕ್ಕ ಕಡೆ ಪಕ್ಷಕ್ಕೆ ಏಕೆ ಸೋಲಾಯಿತು ಎಂದು ಪರಾಮರ್ಶನೆಗೆ ಸತ್ಯಶೋಧನ ಸಮಿತಿ ರಚಿಸಲಾಗುವುದು. ಈ ಸಮಿತಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ ಎಂದರು.

ಎಐಸಿಸಿ ಸತ್ಯಶೋಧನ ಸಮಿತಿ ಭೇಟಿ: ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿ ರಾಜ್ಯಗಳಿಗೆ ಎಐಸಿಸಿ ಸತ್ಯಶೋಧನ ಸಮಿತಿಯ ಭೇಟಿ ನೀಡಲಿದೆ. ಆ ಸಮಿತಿಯು ಪ್ರತಿ ಕ್ಷೇತ್ರಗಳಿಗೆ ಭೇಟಿ ನೀಡಲು ಸಾಧ್ಯ ಆಗುವುದಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ರಾಜ್ಯದ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಎನ್ ಡಿಎ ಸರ್ಕಾರದ ಹಗರಣಗಳ ವಿರುದ್ಧ ನಿರ್ಣಯ: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಮೂರನೇ ಅವಧಿಗೆ ಅಧಿಕಾರ ಹಿಡಿದ ತಕ್ಷಣ ಷೇರು ಪೇಟೆ ಹಗರಣ, ನೀಟ್ ಮತ್ತು ನೆಟ್ ಹಗರಣ ನಡೆಯಿತು. ಇದರ ಕುರಿತು ಖಂಡನ ನಿರ್ಣಯ ಅಂಗೀಕಾರ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಖಂಡಿಸಿ ಹೋರಾಟ ಮುಂದುವರೆಸಲಾಗುವುದು. ಲೋಕಸಭಾ ಸದನದಲ್ಲಿ ಬಿಜೆಪಿಯ ಹಗರಣಗಳ ಕುರಿತು ಚರ್ಚೆ ನಡೆಸಲು ಅವಕಾಶ ಮಾಡಿಕೊಟ್ಟಿಲ್ಲ. ಅಲ್ಲದೇ ಮೈಕ್ ಗಳನ್ನು ಬಂದ್ ಮಾಡಲಾಗಿತ್ತು ಎನ್ನುವ ಆರೋಪವಿದೆ ಎಂದರು.

ಉಪ ಚುನಾವಣೆ ಎದುರಿಸಲು ತಂಡ ರಚನೆ: ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ವಿಧಾನಸಭಾ ಉಪಚುನಾವಣೆಯನ್ನು ಎದುರಿಸಲು ಮೂರು ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಶಿಗ್ಗಾವಿ ಕ್ಷೇತ್ರದ ವರದಿ ನೀಡಲಾಗಿದೆ. ಜುಲೈ 3 ರ ನಂತರ ಸಂಡೂರಿನ ವರದಿ ಸಲ್ಲಿಸುತ್ತಾರೆ. ಸಚಿವರಾದ ಚಲುವರಾಯಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಕುರಿತು ವರದಿ ನೀಡುತ್ತಾರೆ ಎಂದು ತಿಳಿಸಿದರು.

ಕೆಪಿಸಿಸಿ ಪದಾಧಿಕಾರಿಗಳ ಸಭೆ
ನಾಯಕತ್ವ ಬದಲಾವಣೆ: ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ- ಸಿಎಂ ಸಿದ್ದರಾಮಯ್ಯ ಉವಾಚ

ಶಾಸಕರ ಮನೆಯಲ್ಲಿ ಪಕ್ಷದ ಸಭೆ ನಡೆಸುವಂತಿಲ್ಲ: ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಶಾಸಕರ ಮನೆಯಲ್ಲಿ ಪಕ್ಷದ ಸಭೆಗಳನ್ನು ನಡೆಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಶಾಸಕರ ಮನೆಯಲ್ಲಿ ಸಭೆ ನಡೆಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಸಭೆಗೆ ಶಾಸಕರ ಬೆಂಬಲಿಗರ ಹೊರತಾಗಿ ಬೇರೆಯ ಪದಾಧಿಕಾರಿಗಳು ಬರುವುದಿಲ್ಲ ಎನ್ನುವ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗುವುದು. ಸಭೆಗಳನ್ನು ಪಕ್ಷದ ಕಚೇರಿ ಅಥವಾ ಕಲ್ಯಾಣ ಮಂಟಪದಲ್ಲಿ ನಡೆಸಬೇಕು, 5 ವರ್ಷ ಹಾಗೂ ಎರಡು ಅವಧಿಗೆ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ನಡೆಸಿದವರು ಹಾಗೂ ಸಕ್ರಿಯವಾಗಿ ಇಲ್ಲದೆ ಇರುವವರನ್ನು ಬದಲಾವಣೆ ಮಾಡಲು ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದರು.

ಪಕ್ಷದಲ್ಲಿ ನೂತನ ವಿಭಾಗಗಳ ಪ್ರಾರಂಭ: ಸಾರಿಗೆ, ಕೊಳೆಗೇರಿ, ಸಹಕಾರಿ, ಅಪಾರ್ಟ್ಮೆಂಟ್ ನಿವಾಸಿಗಳ ಕ್ಷೇಮಾಭೀವೃದ್ಧಿ ವಿಭಾಗಗಳನ್ನು ಪ್ರಾರಂಭ ಮಾಡಲಾಗುವುದು. ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಪ್ರತ್ಯೇಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಕಾರ್ಯಕರ್ತರ ಭೇಟಿಗೆ ಜಿಲ್ಲಾ ಮಂತ್ರಿಗಳಿಗೆ ಸೂಚನೆ: 15 ದಿನಗಳಿಗೆ ಒಮ್ಮೆ ಜಿಲ್ಲಾ ಕೇಂದ್ರ ಹಾಗೂ ತಿಂಗಳಿಗೆ ಒಮ್ಮೆ ಬೆಂಗಳೂರಿನಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಕಾರ್ಯಕರ್ತರನ್ನು ಭೇಟಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಪಕ್ಷದ ಕಚೇರಿಯಲ್ಲಿ ಇಬ್ಬರು ಮಂತ್ರಿಗಳ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಈ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ. ಶೀಘ್ರದಲ್ಲಿ ದಿನಾಂಕ ಪ್ರಕಟ ಮಾಡಲಾಗುವುದು. ನಂತರ ಪರಜಿತ ಅಭ್ಯರ್ಥಿಗಳ ಮತ್ತು ಇತರೇ ಪದಾಧಿಕಾರಿಗಳ ಸಭೆಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com