
ಮಂಡ್ಯ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಮಗೆ ಮಂಡ್ಯದಲ್ಲಿ ಜನತಾ ದರ್ಶನ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಶುಕ್ರವಾರ ತಮ್ಮ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರಾಜ್ಯದ ಅಧಿಕಾರಿಗಳ ಸಮ್ಮುಖದಲ್ಲಿ ಜನತಾ ದರ್ಶನದ ವೇಳೆ ಮಾತನಾಡಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯಕ್ಕೆ ತೆರಳುವ ಮುನ್ನ ಮೈಸೂರಿನ ಜಿಲ್ಲಾ ಕೇಂದ್ರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮಂಡ್ಯದಲ್ಲಿ ಜನತಾ ದರ್ಶನ ನಡೆಸಲು ರಾಜ್ಯ ಸರ್ಕಾರ ನನಗೆ ಅವಕಾಶ ನೀಡುತ್ತಿಲ್ಲ. ಇಂದಿನ ಮಂಡ್ಯ ಜನತಾ ದರ್ಶನ ರದ್ದುಗೊಳಿಸುವಂತೆ ಒತ್ತಡ ಹೇರಲಾಗಿದೆ ಎಂದರು.
ಜನತಾ ದರ್ಶನವನ್ನು ರದ್ದು ಮಾಡಿ.. ಸಂಪುಟ ಸಭೆಯಲ್ಲಿ ಮಾರ್ಗಸೂಚಿಯನ್ನೂ ಹೊರಡಿಸಿದ್ದಾರೆ. ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆಂದು ನನಗೆ ಗೊತ್ತು. ರಾಜ್ಯದ ಕಾಂಗ್ರೆಸ್ ಸರ್ಕಾರವು ಜನರನ್ನು ಭೇಟಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದರೂ, ನಾನು ಜನರ ಕಷ್ಟಗಳನ್ನು ಆಲಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಇದರ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಕೂಡ ಶನಿವಾರ 'ಜನತಾ ದರ್ಶನ' ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಪ ನಿರಾಕರಿಸಿದ ಸಿದ್ದರಾಮಯ್ಯ
ಇನ್ನು ಎಚ್ ಡಿ ಕುಮಾರಸ್ವಾಮಿ ಆರೋಪವನ್ನು ನಿರಾಕರಿಸಿರುವ ಸಿಎಂ ಸಿದ್ದರಾಮಯ್ಯ, ''ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಜನತಾದರ್ಶನ ನಡೆಸಬಹುದು. ಈ ನಿಯಮ ಹೊಸದಲ್ಲ, ಕಳೆದ ಹಲವು ವರ್ಷಗಳಿಂದ ಇದೆ. ಹಿಂದಿನ ಬಿಜೆಪಿ ಸರ್ಕಾರವೂ ಪರಿಶೀಲನಾ ಸಭೆ ನಡೆಸುವ ಅಧಿಕಾರ ಪ್ರತಿಪಕ್ಷ ನಾಯಕರಿಗೂ ಇಲ್ಲ ಎಂದು ಆದೇಶ ಹೊರಡಿಸಿತ್ತು. ಈ ನಿಯಮ ಕುಮಾರಸ್ವಾಮಿಯವರಿಗಾಗಿ ಮಾಡಿಲ್ಲ, ಕಳೆದ ಹಲವು ವರ್ಷಗಳಿಂದ ಇದೆ ಎಂದು ಹೇಳಿದರು.
Advertisement