
ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಗಳ ಪೈಪೋಟಿ ಮತ್ತು ಆಂತರಿಕ ಭಿನ್ನಾಭಿಪ್ರಾಯದಲ್ಲಿ ಮುಳುಗಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿಎಂ ಸಿದ್ದರಾಮಯ್ಯ ಮತ್ತು ಅವರ ಆಡಳಿತ ಎಚ್ಚೆತ್ತುಕೊಂಡು ಜನರನ್ನು ರಕ್ಷಿಸಬೇಕು ಎಂದು ಭಾನುವಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡೆಂಘಿ ಪ್ರಕರಣಗಳು, ಹದಗೆಟ್ಟ ಕಾನೂನು ಸುವ್ಯವಸ್ಥೆ, ರಾಜ್ಯ ಮತ್ತು ನಗರದಲ್ಲಿ ಮೂಲಸೌಕರ್ಯ ಯೋಜನೆಗಳ ಸ್ಥಗಿತತೆಯನ್ನು ಪ್ರಸ್ತಾಪಿಸಿದ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಸರ್ಕಾರ ತನ್ನ ಆಂತರಿಕ ಬಿರುಕುಗಳ ನಡುವೆ ಜನರನ್ನು ಮರೆತಿದೆ ಎಂದು ಆರೋಪಿಸಿದರು.
'ನಗರ ಹಾಗೂ ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿದ್ದು, ಅದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಸರಕಾರ ಗಾಢ ನಿದ್ರೆಯಲ್ಲಿದೆ. ಈ ಸರಕಾರಕ್ಕೆ ಏನನ್ನೂ ಹೇಳಿದರೂ ಪ್ರಯೋಜನವಿಲ್ಲ, ಬಂಡೆ ಮೇಲೆ ನೀರು ಸುರಿದಂತೆ ಆಗುತ್ತದೆ ಎಂದು ಹೇಳಿದರು.
ಈ ಸರ್ಕಾರದಲ್ಲಿ ಸಿಎಂ-ಡಿಸಿಎಂ ಯಾರಾಗಬೇಕು ಎಂಬ ಪೈಪೋಟಿ ಮತ್ತು ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿದ್ದು, ಕರ್ನಾಟಕದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆ ಎಂಬುದನ್ನು ರಾಜ್ಯದ ಜನರನ್ನು ಮರೆತಿದ್ದಾರೆ. ಹಾಗೆಯೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಲವಾರು ಅತ್ಯಾಚಾರ, ಕೊಲೆ, ಹಗಲು ಕೊಲೆ ಪ್ರಕರಣಗಳು ಹೊರ ಬರುತ್ತಿದ್ದರೂ ಪ್ರಶ್ನಿಸುವವರೇ ಇಲ್ಲದ ಸ್ಥಿತಿ ಇದೆ. ಆದ್ದರಿಂದ ಸರ್ಕಾರ ಮತ್ತು ಮುಖ್ಯಮಂತ್ರಿ ಎಚ್ಚೆತ್ತುಕೊಂಡು ಜನರನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಡೆಂಘಿ ಜೊತೆಗೆ ಝಿಕಾ ವೈರಸ್ ಪ್ರಕರಣಗಳು ವರದಿಯಾಗುತ್ತಿದ್ದು, ಜನರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಮತ್ತು ಔಷಧಿಗಳ ಲಭ್ಯತೆ ಮತ್ತು ಅವುಗಳ ಬೆಲೆಗಳ ಬಗ್ಗೆ ಸಮಸ್ಯೆಗಳಿವೆ ಆದರೂ, ಸರ್ಕಾರ ಡೆಂಘಿ ಪರೀಕ್ಷೆಗೆ ದರ ನಿಗದಿ ಮಾಡಿದ್ದರೂ ಯಾರೂ ಪಾಲಿಸುತ್ತಿಲ್ಲ. ಬೆಂಗಳೂರಿನಲ್ಲಿ ಡೆಂಗೆ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ, ಸರ್ಕಾರಿ ವ್ಯವಸ್ಥೆ ಕುಸಿದಿದೆ, ಆರೋಗ್ಯ ಇಲಾಖೆ ಗಾಢ ನಿದ್ದೆಯಲ್ಲಿದೆ. ಯಾವುದೇ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ, ಮೂಲಸೌಕರ್ಯ ಯೋಜನೆಗಳು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದು, ಮಳೆಯಿಂದಾಗಿ ನೀರು ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ ಬಿಡಬ್ಲ್ಯುಎಸ್‌ಎಸ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪೈಪ್‌ಗಳಲ್ಲಿ ಸೋರಿಕೆಯಾಗಿದ್ದು, ನೀರು ಮತ್ತು ಒಳಚರಂಡಿ ಸಂಗ್ರಹಣೆಗೆ ಕಾರಣವಾಗಿದೆ. ಸರ್ಕಾರವಾಗಲಿ, ಇಲಾಖೆಗಳಾಗಲಿ ಇತ್ತ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
ಇನ್ನು ಮುಖ್ಯಮಂತ್ರಿಯಾಗಲಿ, ಉಪ ಮುಖ್ಯಮಂತ್ರಿಯಾಗಲಿ, ಮಂತ್ರಿಗಳಾಗಲಿ ಕಾಮಗಾರಿ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿರುವ ಅಥವಾ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ನೀರು ಸಂಗ್ರಹವಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು ರೌಂಡ್ ಹೋಗುತ್ತಿಲ್ಲ. ಬೆಂಗಳೂರಿನಲ್ಲಿ ಮಾರ್ಷಲ್‌ಗಳಿದ್ದಾರೆ. ಅವರು ಹಣ ಸಂಗ್ರಹಿಸುವುದಕ್ಕಾಗಿ ಅಥವಾ ಹಣ ಸಂಪಾದನೆಯಲ್ಲಿ ತೊಡಗುತ್ತಾರೆಯೇ ಹೊರತು ಸಾರ್ವಜನಿಕ ಕೆಲಸಕ್ಕಾಗಿ ಅಲ್ಲ. ಬಿಬಿಎಂಪಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ನಗರದ ಯಾವುದೇ ವಾರ್ಡ್‌ಗಳಿಗೆ ಭೇಟಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು
Advertisement