ವೈಫಲ್ಯಗಳ ಮರೆಮಾಚಲು ಸರ್ಕಾರ ಉದ್ಯೋಗ ಮೀಸಲಾತಿ ವಿಚಾರ ಪ್ರಸ್ತಾಪಿಸಿದೆ: BJP ಆರೋಪ

ಈ ನೆಲದಲ್ಲಿ ಬದುಕು ಮಾಡುತ್ತ ಕನ್ನಡ ಕಲಿತವರೆಲ್ಲ ಕನ್ನಡಿಗರೇ ಎಂದು ಪರಿಗಣಿಸಿ ಈ ನೆಲದ ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಬಹುದಿನಗಳ ಹೋರಾಟದ ಬೇಡಿಕೆಗೆ ನಿನ್ನೆಯಷ್ಟೇ ‘ಅಸ್ತು ‘ಎಂದು ಹೆಜ್ಜೆ ಇಟ್ಟಿದ್ದ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’ ಹೊಡೆದಿರುವುದೇಕೆ?
ಬಿಜೆಪಿ
ಬಿಜೆಪಿ
Updated on

ಬೆಂಗಳೂರು: ಹಗರಣಗಳು ಮತ್ತು ವೈಫಲ್ಯಗಳಿಂದ ಜನರ ಗಮನ ಬೇರೆಡೆಗೆ ಸೆಳೆಯರು ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ? ಅಪಮಾನಿಸಲು ನಿಮಗೆ ಕನ್ನಡಿಗರೇ ಬೇಕಿತ್ತೆ? ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ದಿಢೀರ್ ತಡೆಹಿಡಿದು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಅಪಮಾನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ರಣಹೇಡಿ ನಿರ್ಧಾರವನ್ನು ಸಮಸ್ತ ಕರುನಾಡ ಜನರ ಪರವಾಗಿ ಖಂಡಿಸುತ್ತೇವೆಂದು ಹೇಳಿದೆ.

ಈ ನೆಲದಲ್ಲಿ ಬದುಕು ಮಾಡುತ್ತ ಕನ್ನಡ ಕಲಿತವರೆಲ್ಲ ಕನ್ನಡಿಗರೇ ಎಂದು ಪರಿಗಣಿಸಿ ಈ ನೆಲದ ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಬಹುದಿನಗಳ ಹೋರಾಟದ ಬೇಡಿಕೆಗೆ ನಿನ್ನೆಯಷ್ಟೇ ‘ಅಸ್ತು ‘ಎಂದು ಹೆಜ್ಜೆ ಇಟ್ಟಿದ್ದ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’ ಹೊಡೆದಿರುವುದೇಕೆ?

ಮುಖ್ಯಮಂತ್ರಿಗಳು ಈ ಕುರಿತು ತಮ್ಮ X ಖಾತೆಯಲ್ಲಿ ಮೂರು ಬಾರಿ ‘ಯೂ ಟರ್ನ್ ಹೊಡೆದು’ ಕೊನೆಗೂ ವಿಧೇಯಕ ಸದ್ಯಕ್ಕೆ ಮಂಡಿಸುತ್ತಿಲ್ಲ ಎನ್ನುವ ಅಂಜುಬುರುಕ ನಿರ್ಧಾರದ ಹಿಂದೆ ನಾಡಿನ ಆತ್ಮ ಗೌರವ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡತನವನ್ನು ಹಿಮ್ಮೆಟ್ಟಿಸುವ ಕರ್ನಾಟಕ ವಿರೋಧಿ ಶಕ್ತಿಗಳ ಲಾಬಿ ಮೇಲುಗೈ ಸಾಧಿಸಿರುವಂತಿದೆ.

ಬಿಜೆಪಿ
ಸಂಸದ ಸ್ಥಾನದಿಂದ ಇ.ತುಕಾರಾಂ ಅನರ್ಹಗೊಳಿಸಿ: ಬಿಜೆಪಿ ಆಗ್ರಹ

ಇಂಡಿ ಕೂಟದಲ್ಲಿ ಯಾವಾಗ ಬಿರುಕು ಮೂಡುತ್ತದೋ ಎಂಬ ಭೀತಿಯಲ್ಲಿರುವ ದೆಹಲಿಯ ದೊಡ್ಡ 'ಕೈ' ಮುಖ್ಯಮಂತ್ರಿಗಳ ಕೈ ಕಟ್ಟಿಹಾಕಿರಲೇಬೇಕು, ಇಲ್ಲದಿದ್ದರೇ ಕನ್ನಡಿಗರ ಬದುಕು ಹಸನಾಗಿಸುವ ವಿಧೇಯಕವನ್ನು ಬದಿಗೆ ಸರಿಸುವ ಪಲಾಯನವಾದಿ ನಿರ್ಧಾರ ಕೈಗೊಳ್ಳಲು ಹೇಗೆ ಸಾಧ್ಯ?

ಸದ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಮುತ್ತಿರುವ ಮಹರ್ಷಿ ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳಿಂದ ತತ್ತರಿಸಿರುವ ಕಾಂಗ್ರೆಸ್ ತನ್ನ ಮುಖ ಮುಚ್ಚಿಕೊಳ್ಳಲು ಹಗರಣದ ಚರ್ಚೆ ಹಾಗೂ ತನಿಖೆಯನ್ನು ದಿಕ್ಕು ತಪ್ಪಿಸಲು ಹಾಗೂ ಜನರ ಗಮನ ವಿಚಲಿತಗೊಳಿಸುವ ಕುತಂತ್ರದಿಂದ ಕನ್ನಡ ಪರ ವಿಧೇಯಕವನ್ನು ತಡೆಹಿಡಿದು ಗುರಾಣಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದರೆ ರಾಜ್ಯದ ಜನತೆ ಕಾಂಗ್ರೆಸ್ಸಿಗರನ್ನು ಎಂದಿಗೂ ಕ್ಷಮಿಸರು.

ವಿಧೇಯಕದ ಕುರಿತು ಮಾಧ್ಯಮಗಳಲ್ಲಿ ಹೆಮ್ಮೆಯಿಂದ ಬೀಗಿದ್ದ ಸಚಿವರುಗಳು ಹಾಗೂ ಕಾಂಗ್ರೆಸ್ ಮುಖಂಡರು ಕೆಲವೇ ಸಮಯದ ಅಂತರದಲ್ಲಿ ನಾಡ ಜನರ ಬಗೆಗಿನ ಐತಿಹಾಸಿಕ ವಿಧೇಯಕ ಹಿಂತೆಗೆದುಕೊಂಡ ಬಗ್ಗೆ ಸಮಸ್ತ ಕನ್ನಡ ಜನತೆಯ ಮುಂದೆ ತಲೆ ಎತ್ತಿ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ಅರ್ಹತೆ ಇದ್ದರೂ ಉದ್ಯೋಗಾವಕಾಶಗಳಿಂದ ವಂಚಿತರಾಗಿ ಹತಾಶೆಗೊಳಗಾಗಿದ್ದ ಗ್ರಾಮೀಣ ಭಾಗದ ಲಕ್ಷಾಂತರ ನಿರುದ್ಯೋಗಿಗಳಿಗೆ ಭರವಸೆಯ ಬೆಳಕು ಮೂಡಿಸಿದ್ದ ಕನ್ನಡಿಗರ ಉದ್ಯೋಗ ಮೀಸಲಾತಿಯ ವಿಧೇಯಕ ಪ್ರಸಕ್ತ ಅಧಿವೇಶನದಲ್ಲೇ ಸರ್ಕಾರ ಮಂಡಿಸಲಿ, ಇಲ್ಲವೇ ಕನ್ನಡಿಗರ ಆಕ್ರೋಶ ಎದುರಿಸಲು ಸಿದ್ದವಾಗಲಿ ಎಂದು ತಿಳಿಸಿದೆ.

ಬಿಜೆಪಿ
ಮುಡಾ ಹಗರಣ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲಿಸದಿರಲು BJP ನಿರ್ಧಾರ!

ವಿಧಾನಸಭೆ ವಿರೋಧ ಪಕ್ಷಧ ನಾಯಕ ಆರ್.ಅಶೋಕ್ ಅವರು ಪೋಸ್ಟ್ ಮಾಡಿ, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು" ಎಂಬ ಕನ್ನಡದ ಗಾದೆ ಮಾತು ಕೇಳಿರಬೇಕಲ್ಲವೇ ಸಿಎಂ ಸಿದ್ದರಾಮಯ್ಯ ನವರೇ? ಇದು ನಿಮಗೆ ಬಹಳ ಸೂಕ್ತವಾಗಿ ಅನ್ವಯಿಸುತ್ತದೆ. ದಲಿತರ ದೊಡ್ಡು ಹೊಡೆದು ಕಳೆದುಕೊಂಡಿರುವ ಮಾನ ಕನ್ನಡಿಗರ ಮೂಗಿಗೆ ತುಪ್ಪ ಸವರಿದರೆ ವಾಪಸ್ಸು ಬರುತ್ತದೆಯೇ? ದಲಿತರ ದುಡ್ಡು ಹೊಡೆದಿರುವ ಬಗ್ಗೆ ಉತ್ತರ ಕೋಡಿ ಸ್ವಾಮಿ ಅಂದರೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಹೊಸ ನಾಟಕ ಶುರು ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯ ನವರೇ, ಕರ್ನಾಟಕದ ಜನತೆ ನಿಮ್ಮ ಕುತಂತ್ರಗಳನ್ನ ಅರಿಯದಷ್ಟು ದಡ್ಡರು, ಅಮಾಯಕರು ಎಂದು ತಿಳಿದಿದ್ದೀರಾ?

ಚುನಾವಣೆ ಬಂದಾಗಲೆಲ್ಲಾ ಅಥವಾ ನಿಮ್ಮ ಸರ್ಕಾರ/ಪಕ್ಷ ಮುಜುಗರಕ್ಕೊಳಗಾದಾಗಲೆಲ್ಲ ಪ್ರತ್ಯೇಕ ಧರ್ಮ, ಪ್ರತ್ಯೇಕ ಧ್ವಜ, ನಂದಿನಿ - ಅಮುಲ್, 'ನನ್ನ ತೆರಿಗೆ ನನ್ನ ಹಕ್ಕು', ಎಂಬ ಇಲ್ಲಸಲ್ಲದ ವಿಚಾರಗಳನ್ನ ಹುಟ್ಟುಹಾಕಿ ಜನರ ಗಮನ ಬೇರೆಡೆ ಸೆಳೆಯುವ ನಿಮ್ಮ ಗೋಸುಂಬೆ ರಾಜಕೀಯ ಕನ್ನಡಿಗರಿಗೆ ಗೊತ್ತಿಲ್ಲ ಎಂಬ ಭ್ರಮೆಯಲ್ಲಿದ್ದೀರಾ?

ನಿಮ್ಮ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ, ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಸಾಧ್ಯವೇ ಇಲ್ಲ. ನಿಮ್ಮ ಪಾಪದ ಕೊಡ ತುಂಬಿದೆ ಸಿದ್ದರಾಮಯ್ಯನವರೇ, ನಿಮ್ಮ ಮುಖವಾಡ ಕಳಚಿದೆ, ಆಟ ಮುಗಿದಿದೆ. ಈ ನಾಟಕವೆಲ್ಲಾ ಬಿಟ್ಟು ತೆಪ್ಪಗೆ ರಾಜೀನಾಮೆ ಕೊಟ್ಟು ನಿಮ್ಮ ಮರ್ಯಾದೆ ಉಳಿಸಿಕೊಳ್ಳಿ, ರಾಜ್ಯದ ಗೌರವವನ್ನೂ ಉಳಿಸಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com