

ಬೆಂಗಳೂರು: ರಾಜ್ಯದಲ್ಲಿ ಪಾರದರ್ಶಕ ಪ್ರಾಮಾಣಿಕ ಆಡಳಿತ ಅಲ್ಲ ಪಾರದರ್ಶಕ ಭ್ರಷ್ಟ ಆಡಳಿತವನ್ನು ಜಾರಿ ಮಾಡಿದ್ದಾರೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದ್ದಾರೆ.
ಇವತ್ತು ಬಿಜೆಪಿ ಮತ್ತು ಜೆಡಿಎಸ್ ವಿಧಾನಪರಿಷತ್ ಸದಸ್ಯರು ಗಾಂಧಿ ಪ್ರತಿಮೆಯ ಮುಂದೆ ಈ ಭ್ರಷ್ಟ ಕಾಂಗ್ರೆಸ್ ಸರಕಾರದ ರೇಟ್ ಕಾರ್ಡ್ ಪ್ರದರ್ಶನ ಮಾಡಿದ್ದೇವೆ ಎಂದು ತಿಳಿಸಿದರು.
ನೀವು ಯಾರು ಬೇಕಿದ್ದರೂ ಇದನ್ನು ಪರಿಶೀಲಿಸಬಹುದು, ಇದು ಶೇ 100ರಷ್ಟು ಪಕ್ಕಾ ಇರುವ ಕಾಂಗ್ರೆಸ್ ರೇಟ್ ಕಾರ್ಡ್ ಎಂದು ಹೇಳಿದರು. ಜಾತಿ ಬಲ ಇದ್ದರೆ ನೀವು ಶೇ 10ರಷ್ಟು ಕಡಿಮೆ ಮಾಡಿಕೊಳ್ಳಬಹುದು. ಇಲ್ಲದೇ ಇದ್ದರೆ ಇನ್ನೂ ಶೇ 10ರಷ್ಟು ಜಾಸ್ತಿ ಕೊಡಬೇಕಾಗಿ ಬರಬಹುದು ಎಂದು ವಿಶ್ಲೇಷಿಸಿದರು. ಆದರೆ, ಈ ರೇಟ್ ಕಾರ್ಡ್ ಫಿಕ್ಸ್ ಮಾಡಿರುವುದು ಪಕ್ಕಾ. ರೇಟ್ ಕಾರ್ಡ್ ಹೀಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆ ರೇಟ್ ಕಾರ್ಡ್ ಅನುಗುಣವಾಗಿ ಎಫ್‌ಎಆರ್ (ಫ್ಲೋರ್ ಏರಿಯ ರೇಷಿಯೋ) ಒಂದು ಚದರಡಿಗೆ 100 ರೂ, ಸಿಎಲ್‌ಯು (ಚೇಂಜ್ ಆಫ್ ಲ್ಯಾಂಡ್ ಯೂಸ್- ಭೂ ಪರಿವರ್ತನೆಗೆ) ಒಂದು ಎಕರೆಗೆ 27 ಲಕ್ಷ ಫಿಕ್ಸ್ ಆಗಿದೆ. ಗೃಹ ಇಲಾಖೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗೆ 50 ಲಕ್ಷದಿಂದ ಒಂದು ಕೋಟಿ ಇದು, ಅದು ಜಾಗದ ಮೇಲೆ ಕಿಮ್ಮತ್ತು ಹೆಚ್ಚು ಕಡಿಮೆ ಆಗುತ್ತದೆ ಎಂದು ತಿಳಿಸಿದರು.
ಇಂಜಿನಿಯರ್‌ಗಳು, ಸಬ್ ರಿಜಿಸ್ಟರ್‌ಗಳು, ಆರ್‌ಟಿಒಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಹಲವು ಹುದ್ದೆಗಳಿಗೆ 50 ಲಕ್ಷದಿಂದ 2 ಕೋಟಿ ರೂ.ವರೆಗೆ ದರ ನಿಗದಿಪಡಿಸಲಾಗಿದೆ ಎಂದು ರವಿ ಆರೋಪಿಸಿದರು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳನ್ನು ಬಯಲಿಗೆಳೆದು ಈಗ ‘ರೇಟ್ ಕಾರ್ಡ್ ’ಅನ್ನು ಜನರ ಮುಂದೆ ಮಂಡಿಸುತ್ತಿದ್ದೇವೆ ಎಂದರು.
ಸಿಎಂ, ಡಿಸಿಎಂ ಸೇರಿದಂತೆ ಎಲ್ಲ ಹುದ್ದೆಗಳಿಗೂ ಬಿಜೆಪಿ ದರ ನಿಗದಿ ಮಾಡಿತ್ತು, ಹೀಗಾಗಿ ಜನ ಅವರನ್ನು ತಿರಸ್ಕರಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ಎಂಎಲ್‌ಸಿ ಮಂಜುನಾಥ ಭಂಡಾರಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ ನಂತರ, ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತದೆ ಎಂದು ಭಂಡಾರಿ ಹೇಳಿದರು.
Advertisement