
ವಿಜಯಪುರ: ಮೈಸೂರಿನ ಮುಡಾ ಹಗರಣ ಸಿಬಿಐ ತನಿಖೆ ಮಾಡಿದರೆ ಯಡ್ಡಿಯೂರಪ್ಪ ಇದ್ದಾನೋ, ವಿಜಯೇಂದ್ರ ಇದ್ದಾನೋ ಅಥವಾ ಯಡ್ಡಿಯೂರಪ್ಪರ ಅಕ್ಕನ ಮಕ್ಕಳು ಇದ್ದಾರೋ ಎಂಬುದು ಬಹಿರಂಗವಾಗಲಿದೆ ಎಂದು ಸ್ವಪಕ್ಷಿಯರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏಕವಚನದಲ್ಲೇ ಹರಿಹಾಯ್ದಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ತನಿಖೆಯನ್ನು ಸಿಬಿಐಗೆ ನೀಡಿದರೆ ಮಾತ್ರ ಸತ್ಯ ಬಹಿರಂಗವಾಗಲಿದೆ. ಹೀಗಾಗಿ ಹಗರಣದ ತನಿಖೆಯನ್ನು ಸಿಬಿಐಗೆ ನೀಡಬೇಕು. ಈ ಪ್ರಕರಣ ಸರಿಯಾಗಿ ತನಿಖೆಯಾದರೆ ಸಿಎಂ ಸಿದ್ದರಾಮಯ್ಯ ದಲಿತ ಹಾಗೂ ಕಾಂಗ್ರೆಸ್ ವಿರೋಧಿ ಎಂಬುದು ಬಹಿರಂಗವಾಗುತ್ತದೆ ಎಂದು ಹೇಳಿದರು.
ರಾಜು ಯಾರ ಶಿಷ್ಯ ಎಂದು ವಿಜಯೇಂದ್ರ ಹೇಳಬೇಕು. ಲೋಕಸಭೆ ಚುನಾವಣೆ ವೇಳೆ ರಾಜು ಯಾಕೆ ಕಾಂಗ್ರೆಸ್ ಸೇರಿದ್ದು? ರಾಜಕೀಯ ಹೊಂದಾಣಿಕೆಗಾಗಿ ಮಾಡಿದ ತಂತ್ರ ಇದು. ಮೈಸೂರು, ಚಾಮರಾಜನಗರ ಗೆಲ್ಲಲು ಕಾಂಗ್ರೆಸ್‌ಗೆ ಪರೋಕ್ಷವಾಗಿ ಬೆಂಬಲ ನೀಡಲು ಸೇರಿದ್ದು. ಅಲ್ಲದೇ, ಸಿದ್ದರಾಮಯ್ಯ ನೇತೃತ್ವದಲ್ಲಿ ಇದನ್ನೆಲ್ಲ ಮುಚ್ಚಿ ಹಾಕಲು ಕಾಂಗ್ರೆಸ್ ಸೇರಿದ್ದಾನೆ. ಇದು ರಾಜು ಬಿಜೆಪಿಯಲ್ಲಿದ್ದಾಗಲೇ ಆದ ಹಗರಣ ಎಂದು ಆರೋಪಿಸಿದರು.
ಮುಡಾ ಹಗರಣದಲ್ಲಿ ಕೇವಲ ಸಿಎಂ ಸಿದ್ದರಾಮಯ್ಯ ಅವರನ್ನು ಮಾತ್ರ ಟಾರ್ಗೆಟ್ ಮಾಡಿದರೆ ಸಾಲದು, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ, ಸಿದ್ಧರಾಮಯ್ಯ, ಡಿಕೆಶಿ ಮತ್ತು ಜಮೀರ್ ಅಹ್ಮದ್ ಹೊಂದಾಣಿಕೆ ರಾಜಕಾರಣ ಮಾಡಿದವರೇ ಎಂದು ಆಕ್ರೋಶ ಹೊರಹಾಕಿದರು.
ಮೂರು ರಾಜಕೀಯ ಪಕ್ಷಗಳಲ್ಲಿಯೂ ಒಳ ಒಪ್ಪಂದದ ಗಿರಾಕಿಗಳಿದ್ದಾರೆ. ಅವರೆಲ್ಲ ಹೊರಗೆ ಬಂದು ಒಂದು ಹೊಸ ಪಕ್ಷ ಕಟ್ಟಬೇಕು. ಅದಕ್ಕೆ ಒಳ ಒಪ್ಪಂದದ ಪಾರ್ಟಿ ಎಂದು ಹೆಸರಿಡಬೇಕು. ಆಗ ಉಳಿದ ಪಕ್ಷಗಳು ಸರಿ ಆಗುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.
ಈಗ ಎಲ್ಲಾ ಸೋತ ಎಂಪಿಗಳು ಮಾತನಾಡಲು ಶುರು ಮಾಡಿದ್ದಾರೆ. ಪಾಪಾ ಈಶ್ವರಪ್ಪನವರಿಗೂ ಅನ್ಯಾಯ ಮಾಡಿದರು. ಅವರು ಏನು ತಪ್ಪು ಮಾಡಿದ್ದರು ಎಂದು ಇದೇ ವೇಳೆ ಪ್ರಶ್ನಿಸಿದರು
Advertisement