
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಹಗರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರೆಸಿದ್ದು, ಒಲಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದರೆ ಸಿದ್ದರಾಮಯ್ಯ ಅವರಿಗೆ ಚಿನ್ನದ ಪದಕ ಖಚಿತ ಎಂದು ವ್ಯಂಗ್ಯವಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಒಲಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ ಭ್ರಷ್ಟಾಚಾರದ ಪಿತಾಮಹನಿಗೆ ಚಿನ್ನದ ಪದಕ ಖಚಿತ-ನಿಶ್ಚಿತ-ಖಂಡಿತ ಎಂದು ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ ಫೋಟೋವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಸಿದ್ದರಾಮಯ್ಯ ಚಿನ್ನದ ಪದಕ, ನಾಗೇಂದ್ರ ಬೆಳ್ಳಿ ಹಾಗೂ ದದ್ದಲ್ ಕಂಚಿನ ಪದಕ ಧರಿಸಿರುವ ಎಡಿಟೆಡ್ ಫೊಟೋವನ್ನು ಹಾಕಿರುವುದು ಕಂಡು ಬಂದಿದೆ.
ಇದೇ ವೇಳೆ ಸಿದ್ದರಾಮಯ್ಯ ಡಿಕೆ.ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಿರುವುದನ್ನೂ ವ್ಯಂಗ್ಯವಾಡಿರುವ ಬಿಜೆಪಿ, ನೆರೆಯಿಂದ ಹಾನಿಗೊಳಗಾದ ಕನ್ನಡಿಗರ ಕಂಬನಿ ಒರೆಸುವುದಕ್ಕಿಂತಲೂ, ಹೈಕಮಾಂಡ್ಗೆ ಕಪ್ಪ ತಲುಪಿಸುವ ಕಾರ್ಯದಲ್ಲಿ ಸಿಎಂ-ಡಿಸಿಎಂ ಮಗ್ನರಾಗಿದ್ದಾರೆಂದು ವ್ಯಂಗ್ಯವಾಡಿದೆ.
ತಾವು ಮಾಡಿರುವ ಹಗರಣಗಳನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪದೇ ಪದೇ ಕೇಂದ್ರದ ವಿರುದ್ಧ ಹರಿಹಾಯುತ್ತಾರೆ. ಈಗ ಬಜೆಟ್ ನಲ್ಲಿ ರಾಜ್ಯಕ್ಕೆ ಏನೂ ಸಿಕ್ಕಿಲ್ಲ ಅಂತ ಕೂಗುಮಾರಿಯಂತೆ ಅರಚುತ್ತಿದ್ದಾರೆ. ಆದರೆ ಸತ್ಯ ಇಲ್ಲಿದೆ. ಕಾಂಗ್ರೆಸ್ ಬೊಗಳೆ ಬಯಲಾಗಿದೆ ಎಂದು ಮತ್ತೊಂದು ಟ್ವೀಟ್ ನಲ್ಲಿ ಹೇಳಿದೆ.
Advertisement