
ಬೆಂಗಳೂರು: ದಲಿತರನ್ನು ಯಾಮಾರಿಸುವುದರಲ್ಲಿ ಸಿಎಂ ಸಿದ್ದರಾಮಯ್ಯನವರು “ಸಿದ್ಧ”ಹಸ್ತರು. ಯಾರ ಆದೇಶ, ಸೂಚನೆ ಮೇರೆಗೆ ನಿಗಮದ ಹಣ ತೆಲಂಗಾಣದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿದೆ? ಎಂದು ಸರ್ಕಾರಕ್ಕೆ ರಾಜ್ಯ ಬಿಜೆಪಿ ಶನಿವಾರ ಪ್ರಶ್ನೆ ಮಾಡಿದೆ.
ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಬಿಜೆಪಿ, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಸರಣಿ ಪ್ರಶ್ನೆಗಳನ್ನು ಮಾಡಿದೆ. ಅಲ್ಲದೆ, ಕಾಂಗ್ರೆಸ್ ಫೇಲ್ಸ್ ಕರ್ನಾಟಕ, ರಿಸೈನ್ ನಾಗೇಂದ್ರ ಎಂದು ಹ್ಯಾಷ್ ಟ್ಯಾಗ್ ನ್ನು ಆರಂಭಿಸಿದೆ.
ಅಧಿಕಾರಿಯ ಡೆತ್ ನೆಟ್ ನಲ್ಲಿ ಸಚಿವರ ಹೆಸರಿದೆ. ಎಫ್ಐಆರ್ ನಲ್ಲಿ ಮಾತ್ರ ಸಚಿವರ ಹೆಸರಿಲ್ಲ ಏಕೆ? ಅಕ್ರಮ ನಡೆದಿದೆ ಅಂತ ಸಚಿವ ನಾಗೇಂದ್ರ ಅವರೇ ಒಪ್ಪಿಕೊಂಡರೂ ಅವರ ರಾಜೀನಾಮೆ ಪಡೆದಿಲ್ಲ ಯಾಕೆ? ಅಕ್ರಮದಲ್ಲಿ ನಿಮಗೇನಾದರೂ ಪಾಲು ಬಂದಿದೆಯಾ? ಎಂದು ಪ್ರಶ್ನಿಸಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಣ ತೆಲಂಗಾಣದ ವಿವಿಧ ಬ್ಯಾಂಕ್ ಖಾತೆಗಳಿಗೆ ರೂ.94.73 ಕೋಟಿ ವರ್ಗಾವಣೆ ಮಾಡಿದ್ಯಾಕೆ? ತೆಲಂಗಾಮದ ಚುನಾವಣೆಗಾಗಿ ಈ ಹಣ ಕಳುಹಿಸಿದ್ದಾ? ದಲಿತರ ದುಡ್ಡಲ್ಲಿ ಜಾತ್ರೆ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ. ಸಿಎಂ ಸಿದ್ದರಾಮಯ್ಯ ನವರೇ, ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಣ ತೆಲಂಗಾಣದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿದ್ಯಾಕೆ?
ಭ್ರಷ್ಟಾತಿ ಭ್ರಷ್ಟ ಕಾಂಗ್ರೆಸ್ ಸರ್ಕಾರ ತಮ್ಮ ಭ್ರಷ್ಟ ಸಚಿವರನ್ನು ಕಾಪಾಡಿಕೊಳ್ಳಲು ಇದೀಗ ಬೃಹನ್ನಳೆ ನಾಟಕ ಆರಂಭಿಸಿದೆ. ಪರಿಶಿಷ್ಟ ಪಂಗಡಕ್ಕೆ ಸೇರಬೇಕಾಗಿದ್ದ ಅಷ್ಟೊಂದು ಕೋಟಿ ಹಣ ಮುಖ್ಯಮಂತ್ರಿ ಹಾಗೂ ಸಚಿವರ ಸೂಚನೆ ಇಲ್ಲದೆ ತೆಲಂಗಾಣದ ಯಾವುದೋ ಕಂಪೆನಿಗೆ ವರ್ಗಾವಣೆ ಆಗಲು ಹೇಗೆ ಸಾಧ್ಯ?
ಸಿಎಂ ಸಿದ್ದರಾಮಯ್ಯನವರೇ, ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ ನೀವು ಕೂಡ ಅದೇ ಕೆಲಸ ಮಾಡುತ್ತಿದ್ದೀರಿ. ಮೊದಲು ಆ ಕೆಲಸ ಬಿಡಿ ಈ ಹಗರಣದಲ್ಲಿ ನಿಮಗೆ ಸಿಕ್ಕಿರುವ ಪಾಲೆಷ್ಟು ಹೇಳಿ? ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದ ಆರೋಪಿ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯುವ ಬದಲು, ಅಕ್ರಮ ಹಣ ವರ್ಗಾವಣೆ ಸಂಬಂಧ ಬ್ಯಾಂಕ್‌ಗಳ ಮೇಲೆ ಮತ್ತು ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ.
ಈಗಾಗಲೇ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಕ್ರಮ ಹಣ ವರ್ಗಾವಣೆ ಸಂಬಂಧ ಸಿಬಿಐಗೆ ದೂರು ದಾಖಲಿಸಿದ್ದರೂ, ಸಿದ್ದರಾಮಯ್ಯ ಸರ್ಕಾರ ಮಾತ್ರ ಸಿಐಟಿ, ಸಿಐಡಿ ತನಿಖೆ ಎಂದು ಕಾಲಹರಣ ಮಾಡಿ ಎಟಿಎಂ ಸರ್ಕಾರಕ್ಕೆ ಕ್ಲೀನ್ ಚಿಟ್ ಕೊಟ್ಟುಕೊಳ್ಳುವ ವಿಫಲ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದೆ, ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ದ್ರೋಹವೆಸಗಲು ಸದಾ "ಸಿದ್ದ" ಸರ್ಕಾರ ಎಂದು ವ್ಯಂಗ್ಯವಾಡಿದೆ.
ವಿಪಕ್ಷ ನಾಯಕ ಆರ್. ಅಶೋಕ್ ಅವರು ಕೂಡ ಟ್ವೀಟ್ ಮಾಡಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಹಾಗು 185 ಕೋಟಿ ಅವ್ಯವಹಾರ ಪ್ರಕರಣದಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆದಿರುವುದು ಅತ್ಯಂತ ಸ್ಪಷ್ಟವಾಗಿದ್ದರೂ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷ ಹಾಗು ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ. ಸಿಎಂ ಸಿದ್ದರಾಮಯ್ಯ ನವರೇ, ಈ ಹಗರಣದಲ್ಲಿ ದಲಿತರ ದುಡ್ಡು ಲೂಟಿಯಾಗಿರುವುದು ಒಂದು ಕಡೆಯಾದರೆ, ಒಬ್ಬ ಅಮಾಯಕ ಹಾಗು ಪ್ರಾಮಾಣಿಕ ಅಧಿಕಾರಿಯ ಬಲಿಯಾಗಿದೆ. ಹತ್ತಾರು ಕಂಪನಿಗಳಿಗೆ ನೂರಾರು ಕೋಟಿ ಮೌಲ್ಯದ ಅಂತರರಾಜ್ಯ ಹಣ ವರ್ಗಾವಣೆ ನಡೆದರುವ ಈ ಪ್ರಕರಣದ ನ್ಯಾಯಯುತ ಇತ್ಯರ್ಥಕ್ಕೆ ಸಿಬಿಐ ತನಿಖೆಯೊಂದೇ ಮಾರ್ಗ. ಹಗರಣ ಇಷ್ಟು ಗಂಭೀರವಾಗಿದ್ದರೂ ಸಿಐಡಿ ತನಿಖೆ, ಎಸ್ ಐಟಿ ತನಿಖೆ ಅಂತ ಕಾಲಹರಣ ಮಾಡಿ, ಕೊನೆಗೆ ಪ್ರಕರಣವನ್ನ ಮುಚ್ಚಿ ಹಾಕುವ ನಿಮ್ಮ ಹುನ್ನಾರವನ್ನ ಅರಿಯದಷ್ಟು ಅಮಾಯಕರಲ್ಲ ಕರ್ನಾಟಕದ ಜನತೆ.
ನಿಮ್ಮ ನಾಟಕವನ್ನ ಸಾಕು ಮಾಡಿ ಈ ಕೂಡಲೇ ಈ ಪ್ರಕರಣವನ್ನ ಸಿಬಿಐಗೆ ವಹಿಸಿ. ಮೃತ ಅಧಿಕಾರಿಯ ಕುಟುಂಬಕ್ಕೆ, ಪರಿಶಿಷ್ಟ ಪಂಗಡ ಸುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ. ಭ್ರಷ್ಟ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕಿತ್ತೊಗೆದು ನಿಮ್ಮ ಸರ್ಕಾರದ ಮರ್ಯಾದೆ ಉಳಿಸಿಕೊಳ್ಳಿ ಎಂದಿದ್ದಾರೆ.
Advertisement