
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಅಚ್ಚರಿ ರೀತಿಯಲ್ಲಿ ಶಿವಮೊಗ್ಗದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಿಲ್ಕಿಸ್ ಭಾನು ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇಷ್ಟಕ್ಕೂ ಯಾರು ಈ ಬಿಲ್ಕಿಸ್ ಭಾನು..?
ಹೌದು.. ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ (Congress) ಇಂದು ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಏಳು ಸ್ಥಾನಗಳ ಜೊತೆಗೆ ಮುಂಬರುವ ಪರಿಷತ್ ಉಪ ಚುನಾವಣೆಗೂ ಕೂಡ ಅಭ್ಯರ್ಥಿ ಘೋಷಿಸಲಾಗಿದೆ.
ಅಲ್ಪಸಂಖ್ಯಾತ ಕೋಟಾದಡಿ ಶಿವಮೊಗ್ಗದ ಮಾಜಿ ಜಿಪಂ ಅಧ್ಯಕ್ಷೆ ಬಿಲ್ಕಿಸ್ ಭಾನು (Bilkis Bhanu) ಅವರಿಗೆ ಕಾಂಗ್ರೆಸ್ ವಿಧಾನ ಪರಿಷತ್ಗೆ ಟಿಕೆಟ್ ನೀಡಲಾಗಿದೆ. ಆ ಮೂಲಕ ಹೊಸ ಮುಖ ಮತ್ತು ಮಹಿಳೆಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿಯ ಆಯ್ಕೆ ಮಾಡಿದೆ.
ಮೂಲತಃ ಬಿಲ್ಕಿಸ್ ಭಾನು ಅವರು ಈ ಹಿಂದೆ ಜಾತ್ಯಾತೀತ ಜನತಾದಳ ಪಕ್ಷದಲ್ಲಿ ಮೊದಲು ಗುರುತಿಸಿಕೊಂಡಿದ್ದರು. ರಾಜಕೀಯ ಸೇರುವ ಮುನ್ನ ಶಿಕ್ಷಕಿಯಾಗಿದ್ದರು. ಜೆಡಿಎಸ್ ನಲ್ಲಿ ಇದ್ದಾಗಲೇ ಶಿವಮೊಗ್ಗ ಜಿಲ್ಲಾ ಪಂಚಾಯತ್ಗೆ 1994-95 ರಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರು.
ಬಳಿಕ 2014 ರಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಭದ್ರಾವತಿ ತಾಲ್ಲೂಕಿನ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ್ದ ಅವರು ಶಿಕ್ಷಕಿಯಾಗಿ ತಮ್ಮ ಜೀವನವನ್ನು ಆರಂಭಿಸಿದ್ದರು. ನಂತರ ರಾಜಕೀಯವಾಗಿ ತೊಡಗಿಸಿಕೊಂಡು ಪಕ್ಷದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಇದೀಗ ಮುಸ್ಲಿಂ ಕೋಟಾದಲ್ಲಿ ಶಿವಮೊಗ್ಗ ಜಿಲ್ಲೆಯ ಮಹಿಳೆಯನ್ನು ಎಂಎಲ್ಸಿ ಅಭ್ಯರ್ಥಿ ಆಗಿ ಪಕ್ಷ ಆಯ್ಕೆ ಮಾಡಿರುವುದು ವಿಶೇಷ.
ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆಶಿಗೆ ಅಭಿನಂದನೆ ಸಲ್ಲಿಸಿದ ಬಿಲ್ಕಿಸ್ ಭಾನು
ಇನ್ನು ತಮಗೆ ಎಂಎಲ್ ಸಿ ಟಿಕೆಟ್ ಘೋಷಣೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಲ್ಕಿಸ್ ಭಾನು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು 'ನಾನು ಜಿಲ್ಲಾ ಪರಿಷತ್ ಸದಸ್ಯಳಾಗಿದ್ದಾಗಿನಿಂದಲೂ ತಳಮಟ್ಟದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಇಂದು ನನ್ನ ಕೆಲಸದ ಮೇಲೆ ನಂಬಿಕೆ ಇಟ್ಟು ಪಕ್ಷ ಹೊಸ ಜವಾಬ್ದಾರಿ ನೀಡಿದೆ. ಇದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಬಿಲ್ಕಿಸ್ ಭಾನು ಹೇಳಿದರು.
ನಾಳೆ ಎಲ್ಲ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಕೆ ಮಾಡಲಿದ್ದು ಜೂನ್ 13ಕ್ಕೆ ಚುನಾವಣೆ ನಡೆಯಲಿದೆ.
Advertisement