
ಬೆಂಗಳೂರು: ಬೆಂಗಳೂರು ಸೆಂಟ್ರಲ್, ಉತ್ತರ ಮತ್ತು ದಕ್ಷಿಣ ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳುವ ಮೂಲಕ ಬೆಂಗಳೂರು ತನ್ನ ಭದ್ರಕೋಟೆ ಎಂಬುದನ್ನು ಬಿಜೆಪಿ ಮತ್ತೊಮ್ಮೆ ಸಾಬೀತುಪಡಿಸಿದೆ. ಅಲ್ಲದೆ, ನಗರ ಮತದಾರರನ್ನೂ ಹೊಂದಿರುವ ಬೆಂಗಳೂರು ಗ್ರಾಮಾಂತರವನ್ನು ಕಾಂಗ್ರೆಸ್‌ನಿಂದ ಕಿತ್ತುಕೊಂಡು ತನ್ನ ಬುಟ್ಟಿಗೆ ಹಾಕಿಕೊಂಡಿದೆ.
ನಗರದ ಮತದಾರರು ಒಂದು ದಶಕದಿಂದ ಬಿಜೆಪಿಗೆ ಆದ್ಯತೆ ನೀಡುತ್ತಿದ್ದಾರೆ, ತನ್ನ ಐದು ಖಾತರಿ ಯೋಜನೆಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಆಡಳಿತಾರೂಢ ಕಾಂಗ್ರೆಸ್, ರಾಜ್ಯ ರಾಜಧಾನಿಯಲ್ಲಿ ಕೇಸರಿ ಪಕ್ಷದ ಗೆಲುವಿನ ವೇಗಕ್ಕೆ ಬ್ರೇಕ್ ಹಾಕಲು ಮತ್ತೆ ವಿಫಲವಾಗಿದೆ.
ಬೆಂಗಳೂರು ನಗರದ ಮತದಾರರು ನೀಡಿರುವ ಈ ತೀರ್ಪಿನಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ, ವಿಶೇಷವಾಗಿ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಬಹು ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ. ‘ಬ್ರ್ಯಾಂಡ್ ಬೆಂಗಳೂರು’ ಅಡಿಯಲ್ಲಿ ನಗರಕ್ಕೆ ಹೊಸ ರೂಪ ನೀಡುವುದಾಗಿ ಅವರು ನೀಡಿದ ಭರವಸೆಗಳು ಮತದಾರರಿಗೆ ಮನವರಿಕೆಯಾಗಿಲ್ಲ ಎಂಬಂತೆ ಕಾಣುತ್ತಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಶಿವಕುಮಾರ್ ಅವರಿಗೆ ನಗರದಿಂದ ಯಾವುದೇ ಲಾಭವಾಗಿಲ್ಲ ಜೊತೆಗೆ ಅವರ ಸಹೋದರ ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರದಲ್ಲಿ ಸೋತಿರುವುದು ಡಬಲ್ ಸೆಟ್ ಬ್ಯಾಕ್ ಆಗಿದೆ. ಕ್ಯಾಬಿನೆಟ್‌ನಲ್ಲಿ ಪ್ರಬಲ ಸ್ಥಾನ ಹೊಂದಿದ್ದರೂ, ಬೆಂಗಳೂರಿನ ಸಚಿವರು ಕೂಡ ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿಲ್ಲ.
ಬೆಂಗಳೂರು ನಗರದಲ್ಲಿ ಪ್ರಬುದ್ಧ ಮತದಾರರನ್ನು ಹೊಂದಿರುವುದು ಬಿಜೆಪಿಗೆ ದೊಡ್ಡ ಅನುಕೂಲವಾಗಿದೆ ಎಂದು ಹೇಳಲಾಗುತ್ತದೆ, ಸರಿಯಾದ ಕಾರ್ಯತಂತ್ರದ ಕೊರತೆ ಮತ್ತು ಹೊಸ ಮುಖಗಳನ್ನು ಕಣಕ್ಕಿಳಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿದ್ದ ಜಯನಗರದ ಮಾಜಿ ಶಾಸಕಿ ಸೌಮ್ಯಾರೆಡ್ಡಿ ಹೊರತುಪಡಿಸಿ, ಪ್ರೊ.ಎಂ.ವಿ.ರಾಜೇಗೌಡ (ಬೆಂಗಳೂರು ಉತ್ತರ) ಮತ್ತು ಮನ್ಸೂರ್ ಅಲಿ ಖಾನ್ (ಬೆಂಗಳೂರು ದಕ್ಷಿಣ) ಇಬ್ಬರೂ ಈ ಹಿಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸಿರಲಿಲ್ಲ.
ಅಲ್ಲದೆ, ನಗರದಲ್ಲಿ ಹಿಂದುಳಿದ ಅಭಿವೃದ್ಧಿ ಯೋಜನೆಗಳು ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿರಬಹುದು. ಲೋಕಸಭಾ ಚುನಾವಣೆಯ ಫಲಿತಾಂಶವೇನಾದರೂ ಒಂದು ಸೂಚಕವಾಗಿದ್ದರೆ, ಬಹುಕಾಲದಿಂದ ಬಾಕಿ ಉಳಿದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಕೆಲವೇ ತಿಂಗಳಲ್ಲಿ ನಡೆಯಲಿರುವುದರಿಂದ ಕಾಂಗ್ರೆಸ್ ಹೊಸ ತಂತ್ರಗಳನ್ನು ರೂಪಿಸಬೇಕಾದ ಅವಶ್ಯಕತೆಯಿದೆ.
Advertisement