
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಸುಳ್ಳು ಆರೋಪಗಳ ಸರಣಿ ಮಾಲೆ ಪೋಣಿಸಿದ್ದ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ವಿಚಾರಣೆಗಾಗಿ ಬೆಂಗಳೂರು ಕೋರ್ಟ್ಗೆ ಬಂದಿದ್ದಾರೆ. ಮರಳಿ ದಿಲ್ಲಿಗೆ ಹೋಗುವುದಕ್ಕೆ ಮುನ್ನ ಸಣ್ಣ ಸಾರ್ವಜನಿಕ ವಿಚಾರಣೆ ಎದುರಿಸಿ ಸ್ವಾಮಿ ಎಂದು ಹೇಳಿರುವ ಬಿಜೆಪಿ, ರಾಹುಲ್ ಗಾಂಧಿಯವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪಾಸ್ಟ್ ಮಾಡಿರುವ ಬಿಜೆಪಿ ನಾಯಕ ಸುನೀಲ್ ಕುಮಾರ್ ಅವರು, ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ರಾಜ್ಯ ಸರ್ಕಾರ ಹೈಕಮಾಂಡ್ ಗೆ ಎಷ್ಟು ಪರ್ಸೆಂಟ್ ಕಪ್ಪ ನೀಡಿದೆ? ಈ ಕಪ್ಪವನ್ನು ಯಾವ ರಾಜ್ಯದ ಚುನಾವಣೆಗೆ ಬಳಸಿಕೊಂಡಿರಿ? ನಿಮಗೆ ಅತ್ಯಾಪ್ತರಾದ ಸಲಹಾಗಾರರ ಶೆಲ್ ಕಂಪನಿಗೆ ರಾಜ್ಯದ ಹಣ ವರ್ಗಾವಣೆಯಾಗಿದ್ದು ಸುಳ್ಳೆ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಹಗಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ಯಾವಾಗ ಪಡೆಯುತ್ತೀರಿ ? ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕಾಗಿ ರಾಜ್ಯದ ಜನತೆಯ ಕ್ಷಮೆ ಎಂದು ಯಾಚಿಸುತ್ತೀರಿ? ಎಂದು ಕೇಳಿದ್ದಾರೆ.
ಇದಕ್ಕೂ ಮುನ್ನ ಮಾಡಿದ್ದ ಮತ್ತೊಂದು ಪೋಸ್ಟ್ ನಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದರೆ ಸಾಲದು, ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪದ ತ್ಯಾಗ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇಷ್ಟು ದಿನಗಳ ಕಾಲ ಸಚಿವರ ರಕ್ಷಣೆ ಮಾಡಿದ್ದ ಸಿದ್ದರಾಮಯ್ಯ, ಈಗ ಸಿಬಿಐ ಪ್ರವೇಶವಾಗುತ್ತಿದ್ದಂತೆ ನಾಗೇಂದ್ರ ರಾಜೀನಾಮೆ ಪಡೆದುಕೊಂಡಿದ್ದಾರೆ. ಹಾಗಾದರೆ ಇಷ್ಟು ದಿನಗಳ ಕಾಲ ಈ ರಕ್ಷಣೆಯ ನಾಟಕ ಮಾಡಿದ್ದು ಪರಿಶಿಷ್ಟ ವರ್ಗಕ್ಕೆ ಮಾಡಿದ ಅನ್ಯಾಯವಲ್ಲವೇ? ಸಿಎಂ ಸಿದ್ದರಾಮಯ್ಯ ಅವರ ಈ ವರ್ತನೆ ಖಂಡಿಸಿ ಸದನದ ಒಳ ಹೊರಗೆ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಕಚೇರಿಯ ನೇರ ಪಾಲ್ಗೊಳ್ಳುವಿಕೆ ಎಂಬುದು ನಮ್ಮ ನೇರ ಆರೋಪವಾಗಿದೆ ಎಂದು ಹೇಳಿದ್ದಾರೆ.
Advertisement