
ಮಂಡ್ಯ: ನನಗೆ ರಾಜ್ಯದಲ್ಲಿ ಪಕ್ಷ ಕಟ್ಟುವ ಜವಾಬ್ದಾರಿಯನ್ನು ವರಿಷ್ಠರು ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಸಿನಿಮಾ ಮಾಡುವ ಬಗ್ಗೆ ಸದ್ಯಕ್ಕೆ ಯಾವುದೇ ಆಲೋಚನೆ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ತಾಲೂಕಿನ ಚಿಕ್ಕಬಾಣಸವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ಸಿನಿಮಾ ರಂಗವನ್ನು ಪೂರ್ಣವಾಗಿ ತ್ಯಜಿಸಿದ್ದೇನೆ. ಇನ್ನು ಮುಂದೆ ಸಂಪೂರ್ಣ ರಾಜಕಾರಣಿಯಾಗಿರುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದಿದ್ದಾರೆ.
ಕುಮಾರಸ್ವಾಮಿಯವರ ಮೇಲೆ ವಿಶ್ವಾಸವಿಟ್ಟು ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದಾರೆ. ಕುಮಾರಸ್ವಾಮಿಯವರು ಐದು ವರ್ಷ ಉತ್ತಮವಾಗಿ ಕೆಲಸ ಮಾಡುತ್ತಾರೆ. ಕೇಂದ್ರದಲ್ಲಿ ಸಚಿವ ಸ್ಥಾನಕ್ಕೆ ಡಿಮ್ಯಾಂಡ್ ಮಾಡಲ್ಲ. ಅವರ ಹಿರಿತನದ ಆಧಾರದ ಮೇಲೆ ಉತ್ತಮ ಸ್ಥಾನ ಸಿಗಲಿದೆ ಎಂದರು. ಇದೇ ವೇಳೆ, ಮಾಜಿ ಸಂಸದೆ ಸುಮಲತಾ ಅವರು ಕುಮಾರಸ್ವಾಮಿ ಗೆಲುವು ಬಯಸಿದ್ದರು. ಪ್ರಚಾರ ವೇದಿಕೆ ಹಂಚಿಕೊಳ್ಳದೇ ಇದ್ರೂ ಅವರ ಬೆಂಬಲಿಗರಿಗೆ ಹೇಳಿದ್ದರು ಎಂದು ತಿಳಿಸಿದರು.
ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಸಂಸತ್ ಪ್ರವೇಶಿಸುತ್ತಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನೇ ನಿಲ್ಲಿಸುತ್ತಾರಾ ಅಥವಾ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸುತ್ತಾರಾ ಅನ್ನೋ ಪ್ರಶ್ನೆಗಳೆದ್ದಿರುವ ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, "ನಾನು 24/7 ರಾಜಕಾರಣಿ. ಇನ್ನು ಸಿನಿಮಾ ಸಂಪೂರ್ಣ ಬಂದ್" ಎಂದಿದ್ದಾರೆ.
ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿದ್ದುಕೊಂಡೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕಿದೆ. ಈಗಾಗಲೇ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರೋದ್ರಿಂದ ಮುಂದೆ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಯಾರೆಂಬುದು ಸದ್ಯದ ಪ್ರಶ್ನೆಯಾಗಿದೆ.
2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ತಾಂತ್ರಿಕವಾಗಿ ಸೋತಿರಬಹುದು. ಆದರೆ, ಆ ಸೋಲು ಸೋಲಲ್ಲ. ಅಂದು ಯಾರ‍್ಯಾರು ಏನೆಲ್ಲಾ ಮಾಡಿದರು, ಮೈತ್ರಿ ಪಕ್ಷದವರೇ ಹೇಗೆ ಕೈ ಕೊಟ್ಟರು ಎಂಬುದು ಜಗಜ್ಜಾಹೀರಾಗಿದೆ. ಎಲ್ಲದಕ್ಕೂ ಒಂದು ಕಾಲ ಬರುತ್ತದೆ. ಅದಕ್ಕಾಗಿ ನಾವು ಕಾಯಬೇಕಷ್ಟೇ ಎಂದು ಹೇಳಿದರು.
Advertisement