ಬದಲಾವಣೆ ಬಯಸಿದ ಮತದಾರ: ಡಿಕೆ ಬ್ರದರ್ಸ್‌ ಭದ್ರಕೋಟೆಯಲ್ಲಿ ಡಾಕ್ಟರ್ ಮಿಂಚು!

ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮ್ಮ ತವರು ಕ್ಷೇತ್ರ ಕನಕಪುರದಿಂದ ಕಡಿಮೆ ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಡಾ ಮಂಜುನಾಥ್
ಡಾ ಮಂಜುನಾಥ್
Updated on

ಬೆಂಗಳೂರು: ಕೇವಲ ಒಂದು ವರ್ಷದ ಹಿಂದೆ ಬಿಜೆಪಿಯಿಂದ ಮುಖ ತಿರುಗಿಸಿ ಭಾರೀ ಅಂತರದಲ್ಲಿ ಡಿಕೆ.ಶಿವಕುಮಾರ್ ಅವರು ಗೆಲ್ಲುವಂತೆ ಮಾಡಿದ್ದ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಯತ್ತ ಮುಖ ಮಾಡಿ, ಡಿಕೆ.ಬ್ರದರ್ಸ್'ಗೆ ಸೋಲಿನ ರುಚಿ ತೋರಿಸಿದ್ದಾರೆ.

ಕಳೆದ ರಾಜ್ಯ ವಿಧಾನಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 1.22 ಲಕ್ಷ ಮತಗಳ ಅಂತರದಿಂದ ಭಾರೀ ಗೆಲುವು ಸಾಧಿಸಿದ್ದರು. ಅಂದರೆ ಒಟ್ಟು ಮತದಾರರಲ್ಲಿ ಶೇ.75 ಕ್ಕೂ ಹೆಚ್ಚು ಮತದಾರರು ಕಾಂಗ್ರೆಸ್ ಪರ ಚಲಾಯಿಸಿದ್ದರು. ಆದರೆ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಆರ್.ಅಶೋಕ್ ಅವರು 20,000 ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರು.

ಆದರೆ, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮ್ಮ ತವರು ಕ್ಷೇತ್ರ ಕನಕಪುರದಿಂದ ಕಡಿಮೆ ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ ಮಂಜುನಾಥ್ 83,303 ಮತಗಳನ್ನು ಪಡೆದರೆ, ಸುರೇಶ್ 1.08 ಲಕ್ಷ ಮತಗಳನ್ನು ಪಡೆದಿದ್ದಾರೆ.

ರಾಮನಗರದಲ್ಲಿ ಮಂಜುನಾಥ್ ಗಿಂತ ಸುರೇಶ್ 145 ಹೆಚ್ಚು ಮತ ಪಡೆದಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರವನ್ನು ಈ ಹಿಂದೆ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದರು. 2023ರಲ್ಲಿ ಇಲ್ಲಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಪುತ್ರ ನಿಖಿಲ್ ಸುಮಾರು 10,000 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲು ಕಂಡಿದ್ದರು.

ಡಾ ಮಂಜುನಾಥ್
ಬೆಂಗಳೂರು ಗ್ರಾಮಾಂತರ ನನ್ನ ವೈಯಕ್ತಿಕ ಸೋಲು: DCM ಡಿಕೆ ಶಿವಕುಮಾರ್

ಇನ್ನು ಮಾಗಡಿಯಲ್ಲಿ ಡಾ.ಮಂಜುನಾಥ್ ಅವರು ಸುಮಾರು 30 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ 21 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕುಮಾರಸ್ವಾಮಿ ಪ್ರತಿನಿಧಿಸುವ ಚನ್ನಪಟ್ಟಣದಲ್ಲಿ ಮಂಜುನಾಥ್ ಅವರು ಮತಯಾಚನೆ ಮಾಡಿದ್ದರು. ಡಿಕೆ.ಶಿವಕುಮಾರ್ ಮತ್ತು ಸುರೇಶ್ ಅವರ ಸಂಬಂಧಿ ಡಾ. ಎಚ್.ಡಿ.ರಂಗನಾಥ್ ಪ್ರತಿನಿಧಿಸುತ್ತಿರುವ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಅವರು ಸುರೇಶ್ ಅವರಿಗಿಂತ ಸುಮಾರು 24,000 ಮತಗಳನ್ನು ಪಡೆದಿದ್ದಾರೆ.

ಅದೇ ರೀತಿ ಆನೇಕಲ್ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ಅಭ್ಯರ್ಥಿ 22 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ, ಬೆಂಗಳೂರು ಗ್ರಾಮಾಂತರ ಒಳಗೊಂಡ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಸ್ಥಾನಗಳಾದ ಕನಕಪುರ, ಮಾಗಡಿ, ರಾಮನಗರ, ಕುಣಿಗಲ್ ಮತ್ತು ಆನೇಕಲ್ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಆದರೂ. ಕ್ಷೇತ್ರದ ಜನರು ಕಾಂಗ್ರೆಸ್ ಪರ ಹೆಚ್ಚು ಒಲವು ತೋರಿಲ್ಲ. ಬಿಜೆಪಿಯತ್ತ ಮುಖ ಮಾಡಿದ್ದಾರೆ.

ಈ ನಡುವೆ ಮಂಜುನಾಥ್ ಅವರ ಗೆಲುವಿನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ಪ್ರಮುಖ ಪಾತ್ರ ವಹಿಸಿದ್ದಾರೆ.

ಆರ್‌ಆರ್‌ನಗರದಲ್ಲಿ ಮಂಜುನಾಥ್ ಅವರು ಸುರೇಶ್‌ ಅವರಿಗಿಂತ 99,000 ಮತಗಳು ಹೆಚ್ಚು ಪಡೆದರೆ, ಬೆಂಗಳೂರು ದಕ್ಷಿಣದಲ್ಲಿ 97 ಸಾವಿರ ಮತಗಳ ಮುನ್ನಡೆ ಪಡೆದು ಗೆಲುವಿನ ಅಂತರವನ್ನು 2.69 ಲಕ್ಷಕ್ಕೆ ಹೆಚ್ಚಿಸಿಕೊಂಡರು. ಬಿಜೆಪಿ ಶಾಸಕರು ಪ್ರತಿನಿಧಿಸುವ ಈ ಎರಡೂ ಕ್ಷೇತ್ರಗಳು ಬಿಜೆಪಿ ಅಭ್ಯರ್ಥಿಯ ಪರವಾಗಿ ಹೆಚ್ಚಿನ ಮತ ಚಲಾಯಿಸಿರುವುದು ಕಂಡು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com