
ನವದೆಹಲಿ: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಬಿಜೆಪಿಯ ರಾಷ್ಟ್ರೀಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವೀಯ ಅವರು ಕರ್ನಾಟಕ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಮಾಳವೀಯ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ಖಾತರಿ ಯೋಜನೆಗಳಿಗೆ ಹಣ ಹೊಂದಿಸಲು ಇಂಧನ ಬೆಲೆ ಏರಿಕೆ ಮಾಡಲಾಗಿದೆ ಎಂದಿದ್ದ ಸಚಿವ ಎಂಬಿ ಪಾಟೀಲ್ ಅವರ ಹೇಳಿಕೆಯನ್ನು ಗುರಿಯಾಗಿಸಿ ಟೀಕಿಸಿದ್ದಾರೆ.
ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆಯಿದೆ. ತಮಿಳುನಾಡು ಹಾಗೂ ಇತರ ರಾಜ್ಯಗಳಲ್ಲಿ 5 ರಿಂದ 10 ರೂಪಾಯಿ ಹೆಚ್ಚಿಗೆ ದರ ಇದೆ. ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತಿದೆ ಅಭಿವೃದ್ಧಿಗೆ, ಗ್ಯಾರಂಟಿ ಯೋಜನೆಗೆ ಹಣ ಬೇಕಲ್ಲ. ಹೀಗಾಗಿ ಬೆಲೆ ಏರಿಕೆ ಮಾಡಲಾಗಿದೆ. ಬೆಲೆ ಏರಿಕೆಯ ಹೊರತಾಗಿಯೂ ಕರ್ನಾಟಕದ ಇಂಧನ ಬೆಲೆಯು ಇತರ ಹಲವು ರಾಜ್ಯಗಳಿಗಿಂತ ಕಡಿಮೆಯಾಗಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಶನಿವಾರ ಹೇಳಿದ್ದರು.
'ರಾಹುಲ್ ಗಾಂಧಿಯವರ 'ಗ್ಯಾರಂಟಿ'ಗಳಿಗೆ ಹಣ ನೀಡಲು ಇಂಧನ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕರ್ನಾಟಕದ ಕೈಗಾರಿಕಾ ಮತ್ತು ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ರಾಹುಲ್ ಗಾಂಧಿ ಕೈ ಹಾಕಿದ ಪ್ರತಿಯೊಂದು ರಾಜ್ಯವನ್ನು ಹಾಳುಮಾಡಿದ್ದಾರೆ' ಎಂದು ಮಾಳವೀಯ ಹೇಳಿದ್ದಾರೆ.
'ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರಿಂದ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಹಿಂದೆ ಡಿಕೆ ಶಿವಕುಮಾರ್ ಬಣ ಒಂದೆಡೆಯಾದರೆ, ಬಿಎಸ್ ಯಡಿಯೂರಪ್ಪ ಅವರನ್ನು ಗುರಿಯಾಗಿಸಿದ್ದಕ್ಕಾಗಿ ಈಗ ಕಾಂಗ್ರೆಸ್‌ನಲ್ಲಿರುವ ಲಿಂಗಾಯತರೂ ಅಸಮಾಧಾನಗೊಂಡಿದ್ದಾರೆ' ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಸರ್ಕಾರದೊಳಗಿನ ಅಸ್ಥಿರತೆಯ ಬಗ್ಗೆ ಗಮನಹರಿಸಬೇಕು. ಕರ್ನಾಟಕದಲ್ಲಿ ಸದ್ಯದ ಸರ್ಕಾರವು ಗಮನಾರ್ಹ ಸವಾಲುಗಳು ಅಥವಾ ಬೆದರಿಕೆಗಳನ್ನು ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ಅದರ ಅವನತಿಗೆ ಕಾರಣವಾಗಬಹುದು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ (Retail Sales Tax) ಹೆಚ್ಚಳ ಮಾಡಿದ್ದು, ಇದರಿಂದಾಗಿ ಲೀಟರ್ ಪೆಟ್ರೋಲ್ ಬೆಲೆ 3 ರೂ. ಮತ್ತು ಡೀಸೆಲ್ ಬೆಲೆ 3.50 ರೂ. ಏರಿಕೆಯಾಗಿದೆ. ಹೊಸ ದರಗಳು ತಕ್ಷಣವೇ ಜಾರಿಗೆ ಬಂದಿದೆ.
Advertisement