
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉತ್ಸುಕರಾಗಿದ್ದಾರೆಂಬ ಸುಳಿವು ಸಿಗುತ್ತಿದ್ದಂತೆಯೇ ಇತ್ತ ಮೈತ್ರಿ ಪಕ್ಷಗಳಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿಯೂ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆಗಳು ಆರಂಭವಾಗಿವೆ.
ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತಾಡಿದ ಕೇಂದ್ರ ಸಚಿವರ ಕುಮಾರಸ್ವಾಮಿಯವರು, ಬೆಂಗಳೂರು ಗ್ರಾಮಾಂತರ ಲೋಕಸಭೆಯ ಫಲಿತಾಂಶವನ್ನು ಪುನರಾವರ್ತಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕೈಜೋಡಿಸುವುದಾಗಿ ಹೇಳಿದರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕುಮಾರಸ್ವಾಮಿಯವರ ಬಾವ ಡಾ ಸಿಎನ್ ಮಂಜುನಾಥ್ ಅವರು, ಡಿಕೆ.ಶಿವಕುಮಾರ್ ಅವರ ಕಿರಿಯ ಸಹೋದರ ಡಿಕೆ ಸುರೇಶ್ ಅವರನ್ನು ಸೋಲಿಸಿದ್ದರು.
ಕುಮಾರಸ್ವಾಮಿ ಅವರು ಬುಧವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕರ್ನಾಟಕ ರಾಜಕೀಯದ ಕುರಿತು ಚರ್ಚೆ ನಡೆಸಿರುವುದಾಗಿ ಹೇಳಿದ್ದು, ಉಭಯ ನಾಯಕರ ಮಾತುಕತೆ ವೇಳೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಅಮಿತ್ ಶಾ ಸೂಚಿಸುತ್ತಾರೆಯೇ ಎಂಬುದರ ಕುರಿತು ಕುತೂಹಲಗಳು ಮೂಡತೊಡಗಿದೆ.
ಡಿಕೆ.ಶಿವಕುಮಾರ್ ಅವರು ಡಿಸಿಎಂ ಆದ ಬಳಿಕ ಕಳೆದ ಒಂದೂವರೆ ವರ್ಷದಿಂದ ಅವರು ಚನ್ನಪಟ್ಟಣಕ್ಕೆ ಹೋಗಿಲ್ಲ. ಈಗ ಕ್ಷೇತ್ರದ ಬಗ್ಗೆ ಅನುಕಂಪ ತೋರುತ್ತಿದ್ದಾರೆ. ಇದುವರೆಗೂ ಚನ್ನಪಟ್ಟಣವನ್ನು ಅಭಿವೃದ್ಧಿಪಡಿಸದಂತೆ ಅವರನ್ನು ಯಾರು ತಡೆದಿದ್ದರು? ಸಂಸದರಾಗಿ ಶಿವಕುಮಾರ್ ಅವರ ಸಹೋದರನ ಕೊಡುಗೆ ಏನಿತ್ತು? ನಮ್ಮ ಕಡೆಯಿಂದ ಯಾರು ಅಭ್ಯರ್ಥಿ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಕೆ.ಶಿವಕುಮಾರ್ ಅವರು ಸ್ಪರ್ಧಿಸಿದ್ದೇ ಆದರೆ, ಇದು ಅವರ ರಾಜಕೀಯ ಜೀವನದ ಅಂತ್ಯವಾಗಲಿದೆ ಎಂದು ಬಿಜೆಪಿ ಎಂಎಲ್‌ಸಿ ಸಿಪಿ ಯೋಗೇಶ್ವರ್ ಅವರು ಹೇಳಿದ್ದು, ಈ ಮೂಲಕ ತಾವೂ ಕೂಡ ಟಿಕೆಟ್ ಆಕಾಂಕ್ಷಿ ಎಂಬುದನ್ನು ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ ಹೇಳಿಕೆ ನೀಡಿರುವ ಡಿಕೆ.ಶಿವಕುಮಾರ್ ಅವರು, ಜನರೇ ನನ್ನ ಶಕ್ತಿ, ಅವರೇ ನನ್ನ ರಾಜಕೀಯ ಭವಿಷ್ಯ ನಿರ್ಧರಿಸಬಲ್ಲರು. ನಾನು ರಾಮನಗರ ಜಿಲ್ಲೆಗೆ ಸೇರಿದವನಾಗಿದ್ದು, ಅವರಿಗೆ ಋಣಿಯಾಗಿದ್ದೇನೆ. ನನಗೆ ಬೆಂಬಲ ನೀಡುವಂತೆ ನಾನು ಜನರನ್ನು ಕೇಳಿದ್ದೇನೆ. ಅವರೇ ನಿರ್ಧರಿಸುತ್ತಾರೆಂದು ಹೇಳಿದ್ದಾರೆ.
ಆದರೆ ಶಿವಕುಮಾರ್ ಅವರು ಸ್ಪರ್ಧಿಸಲು ಉತ್ಸುಕತೆ ತೋರುತ್ತಿರುವುದು ಅಭ್ಯರ್ಥಿಯನ್ನು ಆಯ್ಕೆ ಮಾಡುವ ತಂತ್ರವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಶಿವಕುಮಾರ್ ಚನ್ನಪಟ್ಟಣದಿಂದ ಕಣಕ್ಕಿಳಿದರೆ ಕನಕಪುರದಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿದಂತಾಗುತ್ತದೆ ಎಂದು ಬಿಜೆಪಿ ಮುಖಂಡ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಹೋದರ ಗೆಲ್ಲುತ್ತಾರೆ ಎಂದು ಶಿವಕುಮಾರ್ ನಿರೀಕ್ಷಿಸಿದ್ದರು. ಈಗ ಚನ್ನಪಟ್ಟಣ ಉಪಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲುವ ಚಿಂತನೆ ಇರಬಹುದು ಎಂದು ಹೇಳಿದ್ದಾರೆ.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಶಿವಕುಮಾರ್ ಚನ್ನಪಟ್ಟಣದಿಂದ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ಜೆಡಿಎಸ್ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು. ಕ್ಷೇತ್ರದ ಜನರ ಭಾವನೆ ಏನು ಎಂಬುದು ನಿಗೂಢವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ನಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಗ್ರಹಿಕೆಯಲ್ಲಿ ಡಿಕೆ ಸಹೋದರರು ಇದ್ದರು. ಆದರೆ, ಅದು ಉಲ್ಟಾ ಹೊಡೆಯಿತು. ನಾವೆಲ್ಲರೂ ಜನಾದೇಶಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಟೀಕಿಸಿದ್ದಾರೆ.
Advertisement