ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರ: ಕೈ ಪಾಳಯದಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ!
ಬೆಂಗಳೂರು: ರಾಜ್ಯದಲ್ಲಿ ದಲಿತ, ಲಿಂಗಾಯತ ಮತ್ತು ಅಲ್ಪಸಂಖ್ಯಾತರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಕುರಿತ ಚರ್ಚೆ ಕಾಂಗ್ರೆಸ್ ನಲ್ಲಿ ಮತ್ತಷ್ಟು ಬಿರುಸುಗೊಂಡಿದೆ. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮಾಜಿ ಸಂಸದ ಡಿ.ಸುರೇಶ್ ಅವರು ಜಾತಿ ಆಧಾರದಲ್ಲಿ ಹೊಸದಾಗಿ ಉಪಮುಖ್ಯಮಂತ್ರಿ ಹುದ್ದಿ ಸೃಷ್ಟಿಗೆ ಅಸಮಾಧಾನ ವ್ಯಕ್ತಪಡಿಸಿದ್ದರೆ, ಸಚಿವ ರಾಜಣ್ಣ ಅವರು ಮತ್ತೊಮ್ಮೆ ತಮ್ಮ ಆಗ್ರಹವನ್ನು ಸಮರ್ಥಿಸಿಕೊಡಿದ್ದಾರೆ.
ಈ ಮೂಲಕ ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತರ ನಡುವಿನ ಶೀತಲ ಸಮರ ಬಹಿರಂಗಗೊಂಡಿದೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆಯವರು, ಮೂರು ಡಿಸಿಎಂ ಹುದ್ದೆ ಸೃಷ್ಟಿ ಅದು ರಾಜಣ್ಣ ಅವರ ವೈಯಕ್ತಿಕ ವಿಚಾರ. ಎಲ್ಲರಿಗೂ ಕೇಳೋಕೆ ಹಕ್ಕಿದೆ. ಹೈಕಮಾಂಡ್ ಬಳಿ ಹೋಗಿ ಕೇಳಲಿ. ಯಾರು ಬೇಡ ಅಂದಿಲ್ಲ. ಡಿಸಿಎಂ ಮಾಡುವುದರಿಂದಲೇ ಎಲ್ಲಾ ಆಗುತ್ತೆ ಅನ್ನೋದಾದರೆ ಸಿಎಂನ ಮಾತ್ರ ಬಿಟ್ಟು ಇಡೀ ಕ್ಯಾಬಿನೆಟ್ ಡಿಸಿಎಂ ಆಗಲಿ, ಆಗುತ್ತಾ? ಎಂದು ಪ್ರಶ್ನಿಸಿದರು,
ನಮ್ಮ ಕೆಲಸ ಏನು? ಚುನಾವಣೆಯಲ್ಲಿ ನಾಲ್ಕೈದು ಸ್ಥಾನ ಕಡಿಮೆ ಬಂದಿದೆ. ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಡಿಸಿಎಂ ಹುದ್ದೆ ಯಾಕೆ, ಸಿಎಂ ಹುದ್ದೆನೂ ಹೈಕಮಾಂಡ್ ಬಳಿ ಹೋಗಿ ಕೇಳಲಿ ಯಾರು ಬೇಡ ಅಂದೋರು. ಮಾಧ್ಯಮಗಳ ಬಳಿ ಕೇಳಿದರೆ ಆಗುತ್ತಾ ಎಂದು ಹರಿಹಾಯ್ದರು.
ಪ್ರಿಯಾಂಕ್ ಖರ್ಗೆ ಅವರೊಂದಿಗೆ ಡಿಕೆ.ಶಿವಕುಮಾರ್ ಅವರ ಸಹೋದರ ಡಿಕೆ.ಸುರೇಶ್ ಕೂಡ ಧ್ವನಿ ಗೂಡಿಸಿದ್ದು, ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಆಗಲು ಅರ್ಹರಾದ ಎಂಟಕ್ಕೂ ಹೆಚ್ಚು ನಾಯಕರು ಪಕ್ಷದಲ್ಲಿದ್ದಾರೆ. ಪಕ್ಷ ನಿರ್ಧರಿಸಿದರೆ ಇನ್ನೂ 8-10 ಡಿಸಿಎಂಗಳು ಇರುವುದು ಒಳ್ಳೆಯದೇ... ಎಂಟು ಬಾರಿ ಶಾಸಕರಾಗಿದ್ದ ರಾಮಲಿಂಗಾರೆಡ್ಡಿ, ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ ಡಾ.ಜಿ.ಪರಮೇಶ್ವರ, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್ (ಅಲ್ಪಸಂಖ್ಯಾತರ ಕೋಟಾ), ಕೃಷ್ಣ ಬೈರೇಗೌಡ ಮತ್ತು ಎನ್.ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್ ಮತ್ತು ಆರ್.ವಿ.ದೇಶಪಾಂಡೆ ಅವರನ್ನು ಡಿಸಿಎಂ ಮಾಡಿ ಸಾಮಾಜಿಕ ನ್ಯಾಯ ಕೊಡಿಸಬಹುದಿತ್ತು ಎಂದು ವ್ಯಂಗ್ಯವಾಡಿದರು.
ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿ ಹೆಚ್ಚಿನ ಡಿಸಿಎಂಗಳನ್ನು ನೇಮಿಸಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಭಾನುವಾರ ಬಾಗಲಕೋಟೆಯಲ್ಲಿ ಪುನರುಚ್ಚರಿಸಿದ್ದು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಕೂಡ ಇದನ್ನೇ ಪ್ರತಿಪಾದಿಸಿದ್ದರು.
ಈ ನಡುವೆ ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ ಎಂಬ ಊಹಾಪೋಹಗಳು ಶುರುವಾಗಿದೆ.
ಡಿಸಿಎಂ ಡಿಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತೆರವು ಮಾಡುವ ಸಾಧ್ಯತೆಯಿದೆ ಎನ್ನಲಾಗಿದ್ದು, ಹೀಗಾಗಿ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ