ಲೋಕಸಭೆ ಚುನಾವಣೆ: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಶ್ರೇಯಸ್ ಪಟೇಲ್ ಕಣಕ್ಕೆ?

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಬ್ಬರು ದಿಗ್ಗಜರ ಮೊಮ್ಮಕ್ಕಳ ಕದನಕ್ಕೆ ಹಾಸನ ಕ್ಷೇತ್ರ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಬ್ಬರು ದಿಗ್ಗಜರ ಮೊಮ್ಮಕ್ಕಳ ಕದನಕ್ಕೆ ಹಾಸನ ಕ್ಷೇತ್ರ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಂಸದ ದಿವಂಗತ ಜಿ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಎಂ ಪಟೇಲ್ ಅವರ ಹೆಸರನ್ನು ಹಾಸನ ಕ್ಷೇತ್ರಕ್ಕೆ ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ಮತ್ತು ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಶ್ರೇಯಸ್ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಂಬಂಧಿ. ಪುಟ್ಟಸ್ವಾಮಿಗೌಡ ಅವರು 1999ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದರು. ಶ್ರೇಯಸ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ ಡಿ ರೇವಣ್ಣ ಅವರ ವಿರುದ್ಧ ಅಲ್ಪಮತಗಳ ಅಂತರದಿಂದ ಸೋತಿದ್ದರು. ರೇವಣ್ಣ ಅವರಿಗೆ 88,108 (ಶೇಕಡಾ 47.51) ಬಂದಿದ್ದರೆ ಶ್ರೇಯಸ್ 84,951 (ಶೇ 45.81) ಮತಗಳನ್ನು ಪಡೆದಿದ್ದರು.

ಅವರ ಕಾರ್ಯವೈಖರಿಯಿಂದ ಪ್ರಭಾವಿತರಾಗಿರುವ ಕಾಂಗ್ರೆಸ್, ಒಕ್ಕಲಿಗರು, ಬಹುಸಂಖ್ಯಾತ ದಲಿತರು, ಅಲ್ಪಸಂಖ್ಯಾತರು ಮತ್ತು ವೀರಶೈವ ಲಿಂಗಾಯತರು ಪ್ರಜ್ವಲ್ ರೇವಣ್ಣ ವಿರುದ್ಧ ಮತ ಚಲಾಯಿಸುತ್ತಾರೆ ಎಂಬ ಭರವಸೆಯೊಂದಿಗೆ ಶ್ರೇಯಸ್ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ.

ಸಿಎಂ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ಸಚಿವ ಕೆ.ಎನ್.ರಾಜಣ್ಣ ಅವರು ಶ್ರೇಯಸ್ ಹೆಸರನ್ನು ಪ್ರಸ್ತಾಪಿಸಿದ್ದು, ಹೈಕಮಾಂಡ್ ಮೊದಲ ಪಟ್ಟಿಯಲ್ಲಿಯೇ ಅವರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ
ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್​ಗೆ ಫಿಕ್ಸ್; ಸುಮಲತಾಗೆ ಹಿನ್ನಡೆ, ಡಾ. ಮಂಜುನಾಥ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್!?

ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಜಿಲ್ಲೆಯ ಬಿಜೆಪಿ ನಾಯಕರು ಈಗಾಗಲೇ ದೇವೇಗೌಡರ ವಿರುದ್ಧ ಅದರಲ್ಲೂ ರೇವಣ್ಣ ಕುಟುಂಬದ ವಿರುದ್ಧ ಸಮರ ಸಾರಿದ್ದಾರೆ. ರೇವಣ್ಣ ಅವರ ಎರಡನೇ ಪುತ್ರ ಡಾ.ಸೂರಜ್ ರೇವಣ್ಣ ಕೂಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿಯಾಗಿದ್ದಾರೆ.

ಹಾಸನ ರಾಜಕಾರಣದಲ್ಲಿ ಇದುವರೆಗೆ ದೇವೇ ಗೌಡರ ವಂಶವೇ ಆಡಳಿತ ನಡೆಸುತ್ತಿರಬಹುದು, ಆದರೆ ವಿರೋಧ ಪಕ್ಷಗಳ ನಾಯಕರು ಕುಟುಂಬದ ಹಿಡಿತದಿಂದ ಜಿಲ್ಲೆಯನ್ನು ಕಿತ್ತುಕೊಳ್ಳಲು ಈ ಬಾರಿ ಭಾರೀ ಪ್ರಯತ್ನವನ್ನೇ ನಡೆಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ರಾಜಣ್ಣ ಅವರನ್ನು ಹಾಸನದ ರಾಜೀಯ ಉಸ್ತುವಾರಿ ನೋಡಿಕೊಳ್ಳಲು ನಿಯೋಜಿಸಿದ್ದು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಹೋರಾಟಕ್ಕೆ ಅಣಿಗೊಳಿಸಿದ್ದಾರೆ.

ಒಂದು ವೇಳೆ ಪ್ರಜ್ವಲ್ ರೇವಣ್ಣ ಅವರಿಗೆ ಈ ಚುನಾವಣೆ ಕಠಿಣವಾಗಲಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದರೆ, ಜೆಡಿಎಸ್-ಬಿಜೆಪಿ ಮೈತ್ರಿಕೂಟದ ನಾಯಕರು ಅವರನ್ನು ಕಣಕ್ಕಿಳಿಸುವ ಬಗ್ಗೆ ಮತ್ತೊಂದು ಬಾರಿ ಚಿಂತನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com