ಹೊಸ ಮುಖಗಳಿಗೆ ಪಕ್ಷ ಅವಕಾಶ ನೀಡಿದರೆ ಸ್ವಾಗತಿಸುತ್ತೇನೆ: ನಳಿನ್ ಕುಮಾರ್ ಕಟೀಲ್

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೊಸಬರು ಸ್ಪರ್ಧಿಸಲು ಪಕ್ಷ ಅವಕಾಶ ನೀಡಿದ್ದೇ ಆದರೆ, ಅದನ್ನು ಸ್ವಾಗತಿಸುತ್ತೇನೆಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ಹೇಳಿದರು.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಮಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೊಸಬರು ಸ್ಪರ್ಧಿಸಲು ಪಕ್ಷ ಅವಕಾಶ ನೀಡಿದ್ದೇ ಆದರೆ, ಅದನ್ನು ಸ್ವಾಗತಿಸುತ್ತೇನೆಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಅಧಿಕಾರವೇ ಮುಖ್ಯವಲ್ಲ, ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ, ಅವರು ಗುಡಿಸು ಅಂದರೆ ಗುಡಿಸುತ್ತೇನೆ, ಒರೆಸು ಅಂತ ಹೇಳಿದರೆ ಒರೆಸುತ್ತೇನೆಂದಪ ಹೇಳಿದರು.

ರಾಜಕಾರಣ ಯಾವತ್ತೂ ನಿಂತ ನೀರಲ್ಲ, ನಮ್ಮ ಪಕ್ಷದ ವೈಶಿಷ್ಟ್ಯತೆಯೇ ಅದು, ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಬೆಳೆಸುವುದು. ಪಕ್ಷದ ವರಿಷ್ಠರು ಹೊಸಬರಿಗೆ ಅವಕಾಶ ಕಲ್ಪಿಸಿದರೆ ಅದನ್ನು ಸ್ವಾಗತಿಸುತ್ತೇನೆ . ರಾಷ್ಟ್ರೀಯ ನಾಯಕರು ಯಾವುದೇ ನಿರ್ಣಯ ತೆಗೆದುಕೊಂಡರೂ ಅದನ್ನು ಗೌರವಿಸುತ್ತೇನೆಂದು ತಿಳಿಸಿದರು.

ನಳಿನ್ ಕುಮಾರ್ ಕಟೀಲ್
ಕಮಲ ಕಲಿಗಳಿಗೆ ಅಭ್ಯರ್ಥಿಗಳ ಆಯ್ಕೆ ತಲೆನೋವು: ಕಟೀಲ್ ಬಗ್ಗೆ ದೆಹಲಿ ನಾಯಕರಿಗಿಲ್ಲ ಒಲವು; ಹಲವು ಪ್ರಭಾವಿಗಳಿಗೆ ಟಿಕೆಟ್ ಮಿಸ್!

ಅಸಲಿಗೆ ಎಲ್ಲ ಬಿಜೆಪಿ ನಾಯಕರ ಗುರಿ ಒಂದೇ ಆಗಿದೆ, ದೇಶದೆಲ್ಲೆಡೆ ಬಿಜೆಪಿ ಜಯಭೇರಿ ಬಾರಿಸಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡುವುದು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿನ ಕಾಮೆಂಟ್‌ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಊಹಾಪೋಹಗಳನ್ನು ನಂಬುವುದೂ ಇಲ್ಲ. ಪಕ್ಷ ಸಂಘಟನೆಯಲ್ಲಿ ನಮಗೆ ನಂಬಿಕೆ ಇದೆ. ಪಕ್ಷ ಎಂದಿಗೂ ಕಾರ್ಯಕರ್ತರನ್ನು ಹತ್ತಿಕ್ಕುವುದಿಲ್ಲ. ಸಾಮಾನ್ಯ ಕಾರ್ಯಕರ್ತನ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಪಕ್ಷವು ನನ್ನನ್ನು ಮೂರು ಬಾರಿ ಕಣಕ್ಕಿಳಿಸಿದೆ. ಕಳೆದ 15 ವರ್ಷಗಳಿಂದ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದೇನೆ. ಕೆಲಸ ಮಾಡುತ್ತಿದ್ದೇನೆ, ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡು ಪಕ್ಷದ ಕಾರ್ಯಕರ್ತನಾಗಿದ್ದೇನೆ. ರಾಜ್ಯ ಬಿಜೆಪಿ ಅಧ್ಯಕ್ಷನಾಗಿಯೂ ಪಕ್ಷಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಲಾಗಿದೆ.

ಬಿಜೆಪಿಯಲ್ಲಿ ಯಾರನ್ನೂ ತುಳಿಯುವುದಿಲ್ಲ. ಅವಕಾಶ ಸಿಕ್ಕಾಗ ನನಗೆ ನ್ಯಾಯ ಸಿಕ್ಕಿದೆ. ಅವಕಾಶ ಸಿಕ್ಕಿಲ್ಲ ಅಂದಾಗ ಅನ್ಯಾಯ ಆಗಿದೆ ಎಂದು ಹೇಳುವ ಹಕ್ಕು ನಮಗಿಲ್ಲ. ಎಲ್ಲರನ್ನೂ ಪಕ್ಷ ಬೆಳೆಸಿದೆ. ಟಿಕೆಟ್ ಸಿಕ್ಕಿಲ್ಲ ಎಂದ ಕೂಡಲೇ ಅಂಥವರನ್ನು ಕೈಬಿಟ್ಟಿದೆ ಎಂದು ಅರ್ಥ ಅಲ್ಲ. ಮುಂದಕ್ಕೆ ಬಹಳಷ್ಟು ಅವಕಾಶ ಸಿಗಬಹುದು. ನಾವು ಮಾಡುವುದು ಪಕ್ಷ ಸಂಘಟನೆಯ ಕೆಲಸ. ಯಾವುದೇ ಹಂತದಲ್ಲೂ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com