
ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಮತ್ತು ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಿ ಎನ್ ಚಂದ್ರಪ್ಪ ಅವರು ಮಂಗಳವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದು, ತಮ್ಮ ಸ್ಪರ್ಧೆ ಕುರಿತು ಖಚಿತತೆ ಪಡೆದುಕೊಳ್ಳುವ ಪ್ರಯತ್ನ ನಡೆಸಿದರು.
ಕೋಲಾರ ಕ್ಷೇತ್ರಕ್ಕೆ ಮುನಿಯಪ್ಪ ಹಾಗೂ ಚಿತ್ರದುರ್ಗಕ್ಕೆ ಚಂದ್ರಪ್ಪ ಅವರ ಹೆಸರು ಕೇಳಿ ಬರುತ್ತಿದೆ. ಈ ನಡುವಲ್ಲೇ ಸುರ್ಜೇವಾಲಾ ಅವರನ್ನು ಭೇಟಿ ಮಾಡಿರುವ ಮುನಿಯಪ್ಪ ಹಾಗೂ ಚಂದ್ರಪ್ಪ ಅವರು, ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಅವಕಾಶ ಪಡೆದುಕೊಂಡರೆ ಆಗುವ ಪರಿಣಾಮಗಳು, ಬಿಜೆಪಿ ಅಭ್ಯರ್ಥಿ ಕಣಕ್ಕಿಳಿದರೆ ಆಗುವ ಲಾಭಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಸಭೆ ಬಳಿಕ ಮಾತನಾಡಿದ ಮುನಿಯಪ್ಪ, ಕೋಲಾರದಲ್ಲಿ ಪಕ್ಷ ಯಾರಿಗಾದರೂ ಟಿಕೆಟ್ ನೀಡಲಿ, ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ. ಯಾರಿಗೆ ಟಿಕೆಟ್ ಎನ್ನುವುದು ಹೈಕಮಾಂಡ್ಗೆ ಬಿಟ್ಟದ್ದು. ಯಾರಿಗಾದರೂ ಕೊಡಲಿ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದು ಹೇಳುವ ಮೂಲಕ ತಾವು ಸ್ಪರ್ಧಾಕಾಂಕ್ಷಿಯಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ ಚಂದ್ರಪ್ಪ ಅವರು, ನಾನು ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ. ಮೊದಲ ಪಟ್ಟಿಯಲ್ಲಿ ಯಾಕೆ ನನ್ನ ಹೆಸರನ್ನ ತಡೆ ಹಿಡಿಯಲಾಯಿತೋ ಗೊತ್ತಿಲ್ಲ. ಈ ಬಗ್ಗೆ ವರಿಷ್ಠರನ್ನ ಕೇಳಲು ಹೋಗಿಲ್ಲ. ತಾಂತ್ರಿಕ ಕಾರಣಕ್ಕೆ ತಡೆ ಹಿಡಿದಿರಬಹುದು ಎಂದರು.
Advertisement