ನಮ್ಮಪ್ಪಂಗೆ 6 ವರ್ಷದಲ್ಲಿ 3 ಆಪರೇಷನ್ ಆಗಿದೆ; ಅನುಕಂಪದಲ್ಲಿ ಮತ ಕೇಳುವ ಪ್ರಮೇಯ ನಮಗಿಲ್ಲ: ನಿಖಿಲ್
ಮಂಡ್ಯ: ನಮ್ಮ ತಂದೆಗೆ ಆರು ವರ್ಷದಲ್ಲಿ ಮೂರು ಬಾರಿ ಶಸ್ತ್ರ ಚಿಕಿತ್ಸೆಯಾಗಿದೆ, ಅದನ್ನೆಲ್ಲಾ ಪ್ರೂವ್ ಮಾಡಬೇಕಾ, ಮೊಸಳೆ ಕಣ್ಣೀರು ಸುರಿಸಿ, ಅನುಕಂಪದ ಮೇಲೆ ಮತ ಕೇಳುವ ಪ್ರಮೇಯ ನಮಗಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ನಮ್ಮ ತಂದೆಗೆ ಆಪರೇಷನ್ ಆಗಿರುವುದು ಸತ್ಯ, ಮೂರನೇ ಬಾರಿಗೆ ಆಪರೇಷನ್ ಆಗಿದೆ. ಸುಳ್ಳು ಹೇಳಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳಲ್ಲ. ನಾವು ಅದನ್ನೆಲ್ಲ ಪ್ರೂವ್ ಮಾಡಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.
ಆರು ವರ್ಷಕ್ಕೆ ಮೂರು ಸಾರಿ ಆಪರೇಷನ್‌ಗೆ ಒಳಗಾಗಿದ್ದಾರೆ. ಜಿಲ್ಲೆಯ ಜನತೆ ನೋಡಿರುತ್ತಾರೆ, ಆ ರೀತಿ ಮಾತನಾಡಬೇಡಿ. ನಮಗಾಗಿ ನಾವು ಕಣ್ಣೀರು ಹಾಕಿಲ್ಲ. ಅವರೊಬ್ಬ ಭಾವ ಜೀವಿ. ಕಣ್ಣೀರು ಹಾಕಿ ನಾವು ಪ್ರಚಾರ ಗಿಟ್ಟಿಸಿಕೊಳ್ಳಬೇಕಿಲ್ಲ. ಕುಮಾರಸ್ವಾಮಿ ಬಂದು ಇಲ್ಲಿ ಸ್ಪರ್ಧೆ ಮಾಡ್ತಿರೋದು ಅವರಿಗೆ ಸಹಿಸಲಾಗ್ತಿಲ್ಲ, ಹಾಗಾಗಿ ಈ ರೀತಿ ಲಘುವಾದ ಹೇಳಿಕೆ ನೀಡ್ತಿದ್ದಾರೆ, ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರವನ್ನು ನೀಡ್ತಾರೆ ಎಂದು ಹೇಳಿದರು.
ಜಿಲ್ಲೆಯ ಹಾಗೂ ರಾಜ್ಯದ ಜನರು ನೋಡುತ್ತಾ ಇದ್ದಾರೆ. ಮತದಾರ ತಂದೆ-ತಾಯಿಗಳ ಕೈಯಲ್ಲಿ ಇದಕ್ಕೆ ಉತ್ತರ ನೀಡುವ ಶಕ್ತಿ ಇದೆ. ನಾವು ಮೊದಲಿಗೆ ಭಾರತೀಯರು, ಕನ್ನಡಿಗರು. ಕುಮಾರಣ್ಣ ಎಲ್ಲೇ ಹೋಗಿ ಸ್ಪರ್ಧೆ ಮಾಡಲು ಈ ರಾಜ್ಯದ ಜನರು ಕೊಟ್ಟಿರುವ ಶಕ್ತಿ. ಜನರು ಕುಮಾರಣ್ಣನ ಸ್ಪರ್ಧೆ ನಿರ್ಧಾರ ಮಾಡ್ತಾರೆ.
ಬೇರೆ ಯಾರು ಅವರ ಸ್ಪರ್ಧೆ ನಿರ್ಣಯ ಮಾಡಲ್ಲ. ಜನರ ಆಶಯದಂತೆ ಕುಮಾರಣ್ಣ ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾವು ಬಿಜೆಪಿ ಅವರನ್ನು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ