ಪಿ ಸಿ ಗದ್ದಿಗೌಡರ್
ಪಿ ಸಿ ಗದ್ದಿಗೌಡರ್

ಗ್ಯಾರಂಟಿಗಳಿಗಾಗಿ ಕಾಂಗ್ರೆಸ್ ಗೆ ಮತ ಹಾಕಬೇಕೆಂದು ಜನರಿಗೆ ಅನಿಸುತ್ತಿಲ್ಲ; ಮೋದಿ ಮತ್ತೆ ಪಿಎಂ ಆಗಬೇಕೆಂಬುದು ಎಲ್ಲರ ಆಶಯ: ಪಿ.ಸಿ.ಗದ್ದಿಗೌಡರ್ (ಸಂದರ್ಶನ)

Published on

ನಾನು ಸದಾ ಜನರ ಜೊತೆ ಇರುತ್ತೇನೆ, ಸಣ್ಣ , ಸಣ್ಣ ಸಮುದಾಯಗಳ ಜೊತೆ ಸಂಪರ್ಕದಲ್ಲಿದ್ದೇನೆ, ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಎಲ್ಲ ಜನರನ್ನು ತಲುಪುತ್ತಿಲ್ಲ, ಹೀಗಾಗಿ ಜನರು ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದು ಬಾಗಲಕೋಟ ಬಿಜೆಪಿ ಸಂಸದ ಪಿ ಸಿ ಗದ್ದಿಗೌಡರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Q

ಪ್ರಚಾರದ ವೇಳೆ ಜನರ ಪ್ರತಿಕ್ರಿಯೆ ಹೇಗಿದೆ?

A

ಪ್ರಚಾರದ ವೇಳೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕ್ಷೇತ್ರದ ಎಲ್ಲ ಮತದಾರರನ್ನು ಭೇಟಿ ಮಾಡಿದ್ದೇನೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಬಗ್ಗೆ ಎಲ್ಲರೂ ಯೋಚಿಸುತ್ತಿದ್ದಾರೆ. ಅಲ್ಲದೆ ಹಲವು ವರ್ಷಗಳಿಂದ ಕ್ಷೇತ್ರ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ.

Q

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು?

A

ನಾನು ಸಂಸದನಾಗುವ ಮೊದಲು ನಮ್ಮಲ್ಲಿ ಕೇಂದ್ರೀಯ ವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಪಾಸ್‌ಪೋರ್ಟ್ ಕಚೇರಿ, ನ್ಯಾಯಾಲಯದ ಕಟ್ಟಡಗಳು ಇರಲಿಲ್ಲ. ಬಾಗಲಕೋಟ-ಕುಡಚಿ ರೈಲ್ವೆ ಮಾರ್ಗ ಹಲವು ವರ್ಷಗಳ ಹಿಂದೆ ಮಂಜೂರಾಗಿದ್ದು, ರಾಜ್ಯ ಸರಕಾರ ಭೂಮಿಗೆ ಪರಿಹಾರ ನೀಡದ್ದರಿಂದ ವಿಳಂಬವಾಗಿತ್ತು. ಪರಿಹಾರ ನೀಡುವ ಕಾರ್ಯ ಪೂರ್ಣಗೊಂಡಿದೆ. ಕೇಂದ್ರದಿಂದ ಅನುದಾನ ಬಂದಿದ್ದು, ಸಂಪೂರ್ಣ ಮಾರ್ಗ ಪೂರ್ಣಗೊಳಿಸಲು ಟೆಂಡರ್ ಕರೆಯಲಾಗಿದೆ. ಕಾಮಗಾರಿ ಭರದಿಂದ ಸಾಗುತ್ತಿದೆ.

ಇದಲ್ಲದೆ, ಗದಗ-ಬಾಗಲಕೋಟ ರೈಲ್ವೆ ಮಾರ್ಗದ ಡಬ್ಲಿಂಗ್ ಮತ್ತು ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಮೂರರಿಂದ ನಾಲ್ಕು ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಯೋಜನೆಗಳು ಜನರನ್ನು ತಲುಪಿವೆ. ನಾನು ಮತ್ತು ಕೇಂದ್ರ ಮಾಡಿರುವ ಕೆಲಸಗಳನ್ನು ಜನ ಗಮನಿಸಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿಗೆ ಭದ್ರ ನೆಲೆ ಇದೆ. ಜಿಲ್ಲೆಯ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರದಿಂದ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ.

Q

ನೀವು ನಾಲ್ಕು ಬಾರಿ ಗೆದ್ದಿದ್ದೀರಿ ಮತ್ತು ಐದನೇ ಅವಧಿಗೆ ಮರು ಆಯ್ಕೆ ಬಯಸಿದ್ದೀರಿ. ಅಧಿಕಾರ ವಿರೋಧಿ ಅಂಶವನ್ನು ನೀವು ಹೇಗೆ ನಿರ್ವಹಿಸುತ್ತೀರಿ?

A

ನಾನು ಸದಾ ಜನರೊಂದಿಗೆ ಇರುವ ಕಾರಣ ನನ್ನ ವಿರುದ್ಧ ಅಧಿಕಾರ ವಿರೋಧಿ ಧೋರಣೆ ಇಲ್ಲ. ನಾನು ಚಿಕ್ಕ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಜನರು ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ.

Q

ರಾಜ್ಯ ಸರ್ಕಾರ ಐದು ಖಾತರಿ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಜನರು ಚುನಾವಣೆಯಲ್ಲಿ ಬೆಂಬಲಿಸುತ್ತಾರೆ ಎಂದು ಕಾಂಗ್ರೆಸ್ ಹೇಳಿದೆ, ನಿಮ್ಮ ಅಭಿಪ್ರಾಯವೇನು?

A

ಜನರು ತುಂಬಾ ಸ್ಪಷ್ಟವಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರಬಹುದು, ಆದರೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಜನರು ಬಯಸುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಅವರ ಅಪೇಕ್ಷೆ. ಗ್ಯಾರಂಟಿ ಯೋಜನೆಗಳೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಆ ಯೋಜನೆಗಳು ಎಲ್ಲ ಜನರನ್ನು ತಲುಪಿಲ್ಲ.

ಖಾತ್ರಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಹಲವರು ಅಭಿಪ್ರಾಯಪಡುತ್ತಾರೆ. ರಸ್ತೆಗಳಲ್ಲಿನ ಗುಂಡಿಗಳು ಕೂಡ ತುಂಬಿಲ್ಲ ಎಂದು ಜನರು ಭಾವಿಸುತ್ತಾರೆ. ಖಾತರಿ ಯೋಜನೆಗಳಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಜನರಿಗೆ ಅನಿಸುತ್ತಿಲ್ಲ. ಜನರು ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಲು ಬಯಸುತ್ತಿದ್ದಾರೆ. ಅವರು ಅದನ್ನು ಶೇ. 100 ರಷ್ಚು ಮಾಡುತ್ತಾರೆ. ಸದಾ ಜನರ ಮಧ್ಯೆ ಇರುವ ನನ್ನ ಬಗ್ಗೆ ಅವರಿಗೂ ಸಹಾನುಭೂತಿ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com